ವಿಮ್ಸ್: ದಾಖಲೆಗಳ ಪರಿಶೀಲನೆ ವೇಳೆ ನೂಕುನುಗ್ಗಲು, ಪರಿಸ್ಥಿತಿ ತಿಳಿಗೊಳಿಸಿದ ಗೃಹ ರಕ್ಷಕ ಸಿಬ್ಬಂದಿ

ಬಳ್ಳಾರಿ, ಅ. 7: ನಗರದ ವಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ಡಾ.ಬಿ.ಸಿ.ರಾಯ್ ಉಪನ್ಯಾಸ ಕೊಠಡಿ ಸಂಕೀರ್ಣದಲ್ಲಿ ಗುರಿವಾರ ಏರ್ಪಡಿಸಿದ್ದ ಪ್ಯಾರಾ ಮೆಡಿಕಲ್ ಕೋರ್ಸಿನ ಪ್ರವೇಶಾತಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಟೋಕನ್ ವಿಚಾರವಾಗಿ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ಅರಿತ ಗೃಹ ರಕ್ಷಕ ಸಿಬ್ಬಂದಿಗಳು ನೂಕು ನುಗ್ಗಲು ಗದ್ದಲವನ್ನು ತಾತ್ಕಾಲಿಕವಾಗಿ ಶಮನಗೊಳಿಸುವಲ್ಲಿ ಯಶಸ್ವಿಯಾದರು.
ಗೊಂದಲವಿಲ್ಲದಂತೆ ಮೂಲ ದಾಖಲೆಗಳ ಪರಿಶೀಲನೆಯ ವ್ಯವಸ್ಥೆಯನ್ನು ಸರಿಯಾಗಿ ಮಾಡದ ಸಂಬಂಧಿಸಿದ ಅಧಿಕಾರಿಗಳ ಕುರಿತು ಪೋಷಕರು ಬೇಸರ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದ ಕಾದು ಕುಳಿತ ಪೋಷಕರು ಮಧ್ಯಾನ್ಹ ಊಟಕ್ಕೂ ಹೋಗದೆ ತಮ್ಮ ಮಕ್ಕಳ ಸರದಿ ಯಾವಾಗ ಬರುವುದೋ ಎಂದು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದರು.
ದಾಖಲೆ ಪರಿಶೀಲಿಸುತ್ತಿರುವ ಸಿಬ್ಬಂದಿ ಇಲಾಖೆಯ(ಪ್ಯಾರಾ ಮೆಡಿಕಲ್ ಬೋರ್ಡ್) ತಾಂತ್ರಿಕ ದೋಷದಿಂದಾಗಿ ಇಂಟಿಮೇಷನ್ ಮತ್ತು ಚೆಕ್ ಲಿಸ್ಟ್ ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಸಮಸ್ಯೆಯನ್ನು ಎದುರಿಸಿದರು.
ಶುಕ್ರವಾರ ಮತ್ತು ಶನಿವಾರವೂ ಮೂಲ ದಾಖಲೆಗಳ ಪರಿಶೀಲನೆಯ ನಡೆಯುತ್ತಿದ್ದು ಮುಂಜಾಗ್ರತವಾಗಿ ನೂಕುನುಗ್ಗಲು ಉಂಟಾಗದಂತೆ ವಿಮ್ಸ್ ನಿರ್ದೇಶಕರು ಸೂಕ್ತ ಕ್ರಮ‌ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮ್ಮ ಮಾಧ್ಯಮದ ಮೂಲಕ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸ್ಥಳದಲ್ಲಿದ್ದ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಪ್ರತಿನಿಧಿಗೆ ಮನವಿ ಮಾಡಿದರು.

*****