ಕವಿತೆ ಪೂರ್ತಿಯಾಗದು
ಬರೀ ಬರೆವವರ ಮಾತುಕತೆ ಇಲ್ಲಿ;
ಬರೆಯದವರ ಬವಣೆಗಳ ದುಡಿಮೆಯಲ್ಲಿ!
ಕೂತು ಬರೆವವರ ಹಾಡುಹಸೆಗೆ;
ಬೆವರು ಬಸಿವವರ ನಿಟ್ಟುಸಿರುಗಳ ಹೂಮಾಲೆ!
ಮಮತೆ ಮಹಲು ಕಟ್ಟಿದವರ ಮೈಗಳ ಮೇಲೆ ಕೂತುಣ್ಣುವವರ ಮೇಜವಾನಿ;
ಮಣ್ಣ ಮೇಲೆ ರಕ್ತ ಬಸಿವವರಿಗೆ ಮುಕ್ತಿಯಿರದೆ;
ಮೈಯಿದ್ದವರೆಲ್ಲ ಹೃದಯವಿರುವ ಪದಗಳ ಹಡೆಯದೆ;
ಕವಿತೆ ಪೂರ್ತಿಯಾಗದು
ನೇಸರನ ಬೆಂಕಿಗೂ ಹೂವಾಗುವವರ ಹಿತ;
ಮುಳ್ಳ ಮುರಿತಕೂ ಸದಾ ನಗುವವರ ಸುಖ;
ಕನಸುಗಳಿರದೇ ಸುಮ್ಮನೆ ಜೀವಿಸುವವರ ಘನತೆ;
ರಕ್ತವನೇ ಉಣಲಿಟ್ಟ ಮನುಷ್ಯರ ಮಾಧುರ್ಯತೆ;
ಹಾಡಲಾಗದೇ….
ಮುಗಿಯದಿದು ಕವಿತೆ
ಹೂವ ಘಮ ನಡು ನಿತಂಬ ಬಳ್ಳಿ ಒನಪು;
ಮಾತ ಫಲುಕು ಕೊರಳ ಇಳಿಪು ಎದೆಯ ಚಬುಕು;
ಹಾಡಿದ್ದೇ ಹಾಡು ಹಸಿ ಮೈಯ ಕಸುವ ಬಿಸಿಪು;
ಸಿಂಗಾರದವರ ವೈಯಾರ ಕೈ ಕೆಂಪಾದವರ ಭಿಕ್ಷೆ;
ಕೂತವರ ಆರಾಮ ನಿಲದೆ ದುಡಿವವರ ಕಾಣಿಕೆ;
ಗೋರಿ ಸೇರದ ಕವಿಯ ಬರಿ ಹಾಡು ಕನವರಿಕೆ;
ಅರಿಯಲಾಗದೇ….
ಪೂರ್ತಿಯಾಗದಿದು ಕವಿತೆ
ರಸ್ತೆಗೆ ಜಲ್ಲಿ ಟಾರು ಹಾಕುವವರ ದೇಹದ ಹದ;
ಬೀದಿಯಲಿ ತರಕಾರಿ ಹಣ್ಣು ಪೀಪಿ ಬೆಂಡು ಬತ್ತಾಸು ಕೂಗುವವರ ಆಸೆ;
ಚಿಂದಿ ಉಟ್ಟು ಪೇಪರ್ ಪ್ಲಾಸ್ಟಿಕ್ ಹಾಯುವವರ ತಾಳ್ಮೆ;
ಕಂಪ್ಯೂಟರ್ ತಲೆಯಾದವರ ಮನೆ ಬೆಳಕಿಗೆ ಅರೆಹೊಟ್ಟೆ ಕೂಲಿಯವರ ರಜೆಯಿರದೆ ಉರಿಸೊ ಪಂಜುಗಳು;
ಹಾಡಲಾಗದೆ…
ಪೂರ್ತಿಯಾಗದು ಕವಿತೆ
ಎಷ್ಟು ಹಾಡಿದರೇನು ಹಗಲು?
ನಕ್ಷತ್ರಗಳು ಮುನಿಯವೆಂದು ರಾತ್ರಿಗೆ!
ಕವಿಗೊಂದು ಗೋರಿ ಕಟ್ಟಲಾಗದೆ;
ಚರಮ ಗೀತೆಯ ಬರೆಯಲಾಗದೆ;
ಕವಿತೆ ಪೂರ್ತಿಯಾಗದು!
-ಟಿ.ಪಿ.ಉಮೇಶ್, ಅಮೃತಾಪುರ
ಚಿತ್ರಗುರ್ಗ