ಅನುದಿನ ಕವನ-೨೮೨, ಕವಿ: ಡಾ. ಅಮ್ಮಸಂದ್ರ ಸುರೇಶ್, ಮೈಸೂರು, ಕವನದ ಶೀರ್ಷಿಕೆ: ಅವ್ವ

ಅವ್ವ

 

ಅವ್ವ ಎಂದರೆ ನನ್ನವ್ವ,
ಬಡತನದ ಬೇಗೆಯಲಿ ನಲುಗಿದ ನನ್ನವ್ವ
ನಾನು ಹಸಿದಾಗ ಬಡತನದಲ್ಲೂ ಮುದ್ದೆಗೆ ತುಪ್ಪ ಸವರಿ
ಉಣ್ಣಿಸಿ ಸುಮ್ಮನೆ ಮಾಡಿದ ನನ್ನವ್ವ
ಸಂಜೆಯ ಹಸಿವೆಗೆ ಸೀಕನ್ನು ಸುಟ್ಟು ಕೊಟ್ಟು
ಹಸಿವನು ತಣಿಸಿದ ನನ್ನವ್ವ.
ಅವ್ವ ಎಂದರೆ ನನ್ನವ್ವ

ಬೆಳೆದ ಹೊಲದಲಿ ಕೂಲಿಗಾಗಿ ಕಳೆ ಕೀಳುವಾಗ
ಬದುವಿನಲಿ ಮಲಗಿಸಿದ ತಂಗಿ ಎದ್ದು ಅತ್ತಾಗ
ಓಡೋಡಿ ಬಂದು ಹಾಲುಣಿಸಿದ ನನ್ನವ್ವ.
ಅವ್ವ ಎಂದರೆ ನನ್ನವ್ವ

ಮಡಿಕೆ ಸಾಲಿನಲಿ ಅಳಿದುಳಿದು ಮುಚ್ಚಿಟ್ಟು ಉಳಿಸಿದ
ಚಿಲ್ಲರೆ ಕಾಸು ಸೇರಿಸಿ ನಮ್ಮೂರ ಸಂತೆಯಲಿ
ಯುಗಾದಿಗೆ ಹೊಸ ಬಟ್ಟೆ ಕೊಡಿಸಿದ ನನ್ನವ್ವ
ಅವ್ವ ಎಂದರೆ ನನ್ನವ್ವ

ಅಲ್ಲಿ ಇಲ್ಲಿ ಕೂಲಿ ಮಾಡಿ ಬಂದ ಅಪ್ಪನಿಗೆ
ಬಿಸಿ ಮುದ್ದೆ ಬಸ್ಸಾರು ಮಾಡಿ ಬಡಿಸಿ
ರಾತ್ರಿ ಅಪ್ಪನ ತೋಳು ಬಂದಿಯಲಿ
ಆದರ್ಶ ಸತಿಯಾದ ನನ್ನವ್ವ.
ಅವ್ವ ಎಂದರೆ ನನ್ನವ್ವ.

ಅಕ್ಷರ ಕಲಿಯದ ನನ್ನವ್ವ
ಕೂಲಿ ಮಾಡಿ ಶಾಲೆಗೆ ಮಕ್ಕಳ ಶಾಲೆಗೆ ಕಳಿಸಿದ ನನ್ನವ್ವ.
ಶಾಲೆಗೆ ಸೇರಿಸುವ ದಿನದಂದು ಶಿಕ್ಷಕರು ಶಿರ ಬಳಸಿ ನನ್ನ ಕೈಯಿಂದ ಕಿವಿ ಮುಟ್ಟಿಸುವಾಗ
ಎದೆ ಬಡಿತ, ತವಕಗಳೊಂದಿಗೆ ಶಿಕ್ಷಕರ ಮುಂದೆ ಕೈ ಮುಗಿದು ನಿಂತ ನನ್ನವ್ವ
ಶಾಲೆಗೆ ಸೇರಿಸಿ ನನ್ನನು ದೊಡ್ಡ ವ್ಯಕ್ತಿಯಾದವನಂತೆ ಕನಸು ಕಂಡ ನನ್ನವ್ವ
ಅವ್ವ ಎಂದರೆ ನನ್ನವ್ವ.

-ಡಾ.ಅಮ್ಮಸಂದ್ರ ಸುರೇಶ್, ಮೈಸೂರು
*****