ಅನುದಿನ ಕವನ-೨೮೩, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು

ಸಂಸಾರ….೧
ಸುಖ -ದುಃಖದ
ನೋವು ನಲಿವಿನ
ಮಾತಿಗಾಸ್ವದವೀಯದೇ
ಕೂಡಿ ಹಾಡುವ
ಯುಗಳ ಗೀತೆ

ಪ್ರಕೃತಿ…..೨
ಗೌಪ್ಯ
ವಾಗಿರುವ ತನಕ
ಪ್ರಕೃತಿ, ಕೌತುಕ;
ಬಯಲಾಗೆ
ಬರೀ ಕಂದಕ!

ಮೆಚ್ಚುಗೆ….೩
ಅಸೂಯೆಯ
ರಕ್ಕಸನನ್ನು
ಸದೆ ಬಡಿದ
ಸ-ಹೃದಯನಲ್ಲಿ
ಸ್ಫುರಿಸುವ ಪ್ರಕ್ರಿಯೆ!

ತೃಪ್ತಿ….೪
ಬಿಸಿಲ ಧಗೆಯಲ್ಲಿ
ಬೆಂದ
ಭುವಿ
ಮೊದಲ ಮಳೆಯಲ್ಲಿ
ಕಂಡ
ಹರ್ಷ!

ಎಲ್ಲಿಗೆ….೫
ಬದುಕಿಗೆ
ಬರಗಾಲ ಬಂತೆಂದರೆ
ಗುಳೇ ಹೋಗ ಬಹುದು,
ಪ್ರೀತಿಗೆ ಬರಬಂತಂದ್ರೆ
ಹೋಗುವುದಾದರೂ ಎಲ್ಲಿಗೆ?

ಮಾತು…೬
ನೀನಿಲ್ಲದಿದ್ದಾಗ
ಮಾತುಗಳಲ್ಲಿ
ಮೌನವಿರುತ್ತದೆ;
ನೀನಿದ್ದಾಗ
ಮೌನದಲ್ಲೂ
ಮಾತುಗಳಿರುತ್ತವೆ

ಸಂಗಾತಿ….೭
ದಾಂಪತ್ಯಕ್ಕೆ
ಏಕಾಂತ ಬೇಕು!
ಸುಖಾಂತಕ್ಕೆ
ಸಂಗಾತಿ ಬೇಕು!

ಹೆಸರು….೮
ಆಳ- ಅಗಲ
ಶಾಂತ- ರಭಸ
ತಿಳಿಯದೆಂದೇ
ನದಿಗೆ
ಹೆಣ್ಣಿನ ಹೆಸರಿಟ್ಟಿರುವುದು

ಮಳೆ….೯
ಹುಡುಗೀ
ನೀss
ಕರಿಮೋಡ,
ನೀss ಸುರಿಸುವ
ಪ್ರೀತಿ ಮಳೆಗಾಗಿ
ನಾss ಕಾದಿಹೆ ನೋಡ.

-ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ