ಅಮ್ಮನೆಂಬ ಅದ್ಭುತವೂ……..ಆಕೆಯ ದೇಹದಾನವೂ -ಸಿದ್ಧರಾಮ ಕೂಡ್ಲಿಗಿ

ಖಂಡಿತ ಎಲ್ಲ ಅಮ್ಮಂದಿರೂ ಗ್ರೇಟ್. ಆದರೆ ನನ್ನ ಅಮ್ಮ ಎಲ್ಲರಿಗಿಂತಲೂ ಗ್ರೇಟ್. ಆಕೆಯೇ ಒಂದು ಅದ್ಭುತ. 80ರ ಇಳಿವಯಸಿನಲ್ಲಿಯೂ ಆ ಬದುಕಿನ ಉತ್ಸಾಹ, ಲವಲವಿಕೆ, ಓಡಾಟ ಖಂಡಿತ ನಮಗೆ ಬರಲು ಸಾಧ್ಯವಿಲ್ಲ. ಇಂದಿಗೂ ಕೋಲು ಹಿಡಿಯದೇ ಓಡಾಡಬೇಕೆನ್ನುವ, ಎಲ್ಲ ಕಡೆಯೂ ಹೋಗಬೇಕು, ನೋಡಬೇಕೆನ್ನುವ ಹುಮ್ಮಸ್ಸು ನೋಡಿಯೇ ಬೆರಗಾಗಿದ್ದೇನೆ. ಆಕೆಯ ಸಾಹಿತ್ಯದ ಬರವಣಿಗೆ, ಓದು, ವಿಚಾರಧಾರೆ, ಮಾತಿನಲ್ಲಿನ ಚುರುಕುತನ ಯಾವುದರಲ್ಲೂ ಕಡಿಮೆಯಿಲ್ಲ. ಹೀಗಾಗಿ ನನ್ನ ಅಮ್ಮ ಅದ್ಭುತ.

ಮೊನ್ನೆ ಕೊಪ್ಪಳಕ್ಕೆ ಹೋಗಿದ್ದೆ. ಅಮ್ಮ ಮಾತನಾಡುತ್ತ ” ನನ್ನ ದೇಹವನ್ನು ಮೆಡಿಕಲ್ ಕಾಲೇಜಿಗೆ ಅರ್ಪಿಸಬೇಕೆಂದಿರುವೆ ” ಎಂದಳು.
ನನಗೆ ಇದೆಂಥ ನಿರ್ಧಾರ ಎಂದು ಕಣ್ಣಂಚಿನಲ್ಲಿ ನೀರು ಬಂದು ” ಯಾಕೆ ಈ ಮಾತು ? ” ಎಂದು ಕೇಳಿದೆ. ” ಈ ದೇಹ ಮಣ್ಣಲ್ಲಿ ಕೊಳೆತುಹೋಗುತ್ತದೆ ಏನುಪಯೋಗ ? ಮಣ್ಣಲ್ಲಿ ಮಣ್ಣಾಗುವುದಕ್ಕಿಂತ ಸತ್ತ ಮೇಲೂ ಉಪಯೋಗವಾಗುವ ರೀತಿಯಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಗಾದರೂ ಉಪಯೋಗವಾಗಲಿ ಎಂದು ಈ ನಿರ್ಧಾರ ” ಎಂದಳು. ಅಮ್ಮನ ತಲೆಯಲ್ಲಿ ಒಂದು ವಿಚಾರ ಹೊಕ್ಕರೆ ಬದಲಿಸುವುದು ಅಷ್ಟು ಸುಲಭವಲ್ಲ. ಆಕೆಯ ವಿಚಾರಧಾರೆ ಸೂಕ್ತವೂ ಅನಿಸಿತು. ನಾಲ್ಕು ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹವನ್ನು ಅರಿತುಕೊಳ್ಳಲು ಅಮ್ಮ ಸಹಾಯಕಳಾಗುವಳಲ್ಲ ಎಂದು ಅನಿಸಿತು. ಆಕೆಯ ಮಾತಿಗೆ ತಲೆದೂಗಿದೆ. ಮನಸು ಭಾರವೆನಿಸಿದರೂ ಆಕೆಯ ವಿಚಾರಧಾರೆಯಲ್ಲಿ ಯಾವುದೇ ತಪ್ಪು ಕಾಣಲಿಲ್ಲ. ಸರಿಯಾದ ಗಟ್ಟಿಯಾದ ನಿರ್ಧಾರ ಅಮ್ಮನದು.

ಅಮ್ಮ ಆಗಲೇ ಅದಕ್ಕೆ ಸಂಬಂಧಿಸಿದ ಪತ್ರವನ್ನು ತರಿಸಿಟ್ಟಿದ್ದಳು. ಸರಿ ಅದನ್ನೆಲ್ಲ ನಾನೇ ತುಂಬಿದೆ. ಅಮ್ಮ ಎಷ್ಟು ಉತ್ಸಾಹದಿಂದಿದ್ದಳೆಂದರೆ ಯಾವಾಗ ಹೋಗಿ ಆ ಪತ್ರವನ್ನು ಕೊಟ್ಟು ಬಂದೇನೋ ಎಂಬಂತೆ. ಅಮ್ಮ ನಾನು ಮತ್ತೊಬ್ಬರು ಸೇರಿ ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೋದೆವು. ಅಲ್ಲಿಯ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಕಂಡೆವು. ಅವರಿಗೆ ಅಮ್ಮನ ನಿರ್ಧಾರ ತಿಳಿಸಿದೆ. ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಅಮ್ಮ ಪತ್ರಕ್ಕೆ ಸಹಿ ಮಾಡಿದಳು. ಅವರಿಗೂ ಅಮ್ಮ ನಾಲ್ಕು ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ನನ್ನ ದೇಹದಿಂದ ಎಂದಳು. ” ಅಮ್ಮ ನಿಮ್ಮನ್ನು ನೋಡಿದರೆ ಈ ವಯಸಿನಲ್ಲೂ ಇಷ್ಟು ಉತ್ಸಾಹ ಇದೆ ಖಂಡಿತ ನೀವು ಇನ್ನೂ ಇಪ್ಪತ್ತು ವರ್ಷ ಆರಾಮವಾಗಿ ಬದುಕಿರುತ್ತೀರಿ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ” ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಯಲು ಮೃತ ದೇಹಗಳ ಅಗತ್ಯತೆ ಇದೆ. ಈ ರೀತಿ ದೇಹಗಳನ್ನು ಅರ್ಪಿಸುವವರು ತುಂಬಾ ಕಡಿಮೆ. ತಮ್ಮ ವಿಚಾರ ಎಲ್ಲರಿಗೂ ಮಾದರಿಯಾಗಲಿ ” ಎಂದರು. ಅಮ್ಮ ಅವರಿಗೆ ಮನತುಂಬಿ ನಮಸ್ಕರಿಸಿದಳು.

ಮನೆಗೆ ಬಂದ ಮೇಲೆ ಅಮ್ಮನಿಗೆ ಏನೋ ನಿರಾಳ ಭಾವ. ಇಷ್ಟು ದಿನಗಳವರೆಗೆ ತಲೆಯಲ್ಲಿ ತುಂಬಿಕೊಂಡಿದ್ದ ಕೆಲಸವೊಂದು ಪೂರ್ಣಗೊಳಿಸಿದಂಥ ಭಾವ. ಇಬ್ಬರೂ ಸ್ವಲ್ಪ ಹೊತ್ತು ಸುಮ್ಮನೆ ಕೂತಿದ್ದೆವಾದರೂ ಅಲ್ಲೊಂದು ಅರಿಯದ ಪ್ರೀತಿ, ವಾತ್ಸಲ್ಯದ ಭಾವವಿತ್ತು. ಮರಳಿ ಊರಿಗೆ ಬರುವಾಗ ಅಮ್ಮನನ್ನು ಅಪ್ಪಿಕೊಂಡೆ. ಗುಬ್ಬಚ್ಚಿಯಂತಿರುವ ಅಮ್ಮ ಗಳಗಳನೆ ಅಳತೊಡಗಿದಳು. ನಾನೂ ಅಳತೊಡಗಿದೆ. ಅಲ್ಲಿ ಅರಿಯದ ಅದ್ವಿತೀಯ ವಾತ್ಸಲ್ಯ ಭಾವವಿತ್ತು. ಅಮ್ಮನ ಪ್ರೀತಿಯಲ್ಲಿ ತೊಯ್ದು ಹೋಗಿದ್ದೆ. ನನ್ನ ಬಾಹುಗಳಲ್ಲಿ ಅಮ್ಮ ಗುಬ್ಬಚ್ಚಿಯಷ್ಟು ಆಕಾರ ಹೊಂದಿದ್ದರೂ, ನಾನು ಅಜಾನುಬಾಹುವಾಗಿದ್ದರೂ ಆಕೆ ನನಗಿಂತ ಎಷ್ಟೋ ಪಟ್ಟು ಆಕಾಶದ ಉದ್ದಗಲಕ್ಕೂ ವ್ಯಾಪಿಸಿದಂತೆನಿಸಿತು. ನಾನು ಪೂರ್ತಿ ಚಿಕ್ಕ ಕಣವಾಗಿದ್ದೆ ಅಷ್ಟೆ. ಇನ್ನೇನು ಹೇಳಲಿ. ಹೇಳಲಿಕ್ಕೂ ಪದಗಳು ಉಳಿದಿಲ್ಲ. ಇದನ್ನು ಟೈಪಿಸುವಾಗಲೂ ಕಂಬನಿ……..

-ಸಿದ್ಧರಾಮ ಕೂಡ್ಲಿಗಿ