ಕವಿ ಪರಿಚಯ
ಸಾಹಿತ್ಯ ಸಂಘಟಕ, ರೈತ ಕವಿ ಕೇಶವ ಕಟ್ಟಿಮನಿ ಅವರು
ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕ, ಬಾಲೇಹೊಸೂರ ಗ್ರಾಮದವರು.
ಗ್ರಾಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ. ಮೈಸೂರಿನ ಎಚ್.ಡಿ.ಕೋಟೆಯ ಸರಕಾರಿ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ, ಹುಬ್ಬಳ್ಳಿಯ ಕಾಡಸಿದ್ಧೆಶ್ವರ್ ಕಾಲೇಜ್ ನಲ್ಲಿ ಪದವಿ (ಬಿಎ) ಪೂರೈಸಿದ್ದಾರೆ.
ಕೇಶವ ಕಟ್ಟಿಮನಿ ಅವರು ವೃತ್ತಿಯಲ್ಲಿ ಕೃಷಿಕರು. ರೈತ ಸಂಘದ ಪದಾಧಿಕಾರಿ. ಪುಸ್ತಕ ಪ್ರೇಮಿ. ನಿರಂತರ ಪುಸ್ತಕ ಓದುವ ಹವ್ಯಾಸವೇ ಇವರನ್ನು ಕವಿಯಾಗಿಸಿದೆ. ಇವರ ಹಲವು ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರುವ ಕಟ್ಟಿಮನಿ ಅವರು “ಪುಸ್ತಕ ಓದುವದರಿಂದ ಮನಸ್ಥೈರ್ಯ ಬರುತ್ತದೆ, ಮಾನಸಿಕ ಗೊಂದಲಗಳು ದೂರಾಗುತ್ತವೆ ಓದು ಬೌದ್ಧಿಕ ಆಹಾರ, ಉತ್ತಮ ಪುಸ್ತಕಗಳು ಉತ್ತಮ ಒಡನಾಡಿಗಳು, ಸಂಗಾತಿಗಳು” ಎಂದು ಹೇಳುತ್ತಾರೆ.
ಶಿಕ್ಷಕರಾದ ಯಲ್ಲಪ್ಪ ತಿರಕಣ್ಣವರ ಮತ್ತು ಬಸವರಾಜ್ ಶಿಗ್ಲಿ ಅವರ ಜತೆ ಸೇರಿ ‘ಕನ್ನಡ ಸೃಜನಶೀಲ ಕಲಾ ಸಾಹಿತ್ಯ ಸಮಿತಿ’ ಎಂಬ ಸಾಹಿತ್ಯಕ ಸಂಘ ಕಟ್ಟಿ ಪ್ರತಿ ಹುಣ್ಣಿಮೆ ದಿನದಂದು ನಿರಂತರವಾಗಿ ‘ತಿಂಗಳ ಬೆಳಕು’ಎಂಬ ಮಾಸಿಕ ಕಾರ್ಯಕ್ರಮ ಆಯೋಜಿಸುತ್ತಾ ಕಟ್ಟಿಮನಿ ಅವರು ಗಮನ ಸೆಳೆದಿದ್ದಾರೆ.
ಇತ್ತೇಚೆಗೆ ತಮ್ಮೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ರಿ) ಗ್ರಾಮ ಘಟಕ ಆರಂಭಿಸಿ ರೈತ ದ್ವನಿಯಾಗಿದ್ದಾರೆ.
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಕೇಶವ ಕಟ್ಟಿಮನಿ ಅವರ ‘ಸಿದ್ಧ ಬುದ್ಧನಾದ’ ಕವಿತೆ ಪಾತ್ರವಾಗಿದೆ.👇
ಸಿದ್ಧ ಬುದ್ದನಾದ….
ಸಿದ್ಧನೊಬ್ಬ
ಯುದ್ಧ ತ್ಯಜಿಸಿ
ಬುದ್ಧನಾಗದಿದ್ದರೆ
ಜಗವೆಲ್ಲ ಮಸಣವಾಗುತಿತ್ತು
ಶಸ್ತ್ರ ಬಿಟ್ಟು
ಶಾಸ್ತ್ರ ತುಳಿದು
ಶಾಂತಿ ಮಂತ್ರ ಬೋಧಿಸಿದ
ಆಸೆ ತೊರೆದ
ನಿರಾಸೆ ದೂರವಿಟ್ಟ
ಬದುಕಿನ ಸತ್ಯ ತಿಳಿದು, ತಿಳಿಸಿದ
ಆತ್ಮ ಪರಮಾತ್ಮಗಳ
ಗೆಳೆತನ ಬಿಟ್ಟ
ಆಧ್ಯಾತ್ಮದ ಜಡ ಕಳೆದ
ಮೊದಲು ನಿನ್ನ ನೀ ತಿಳಿ ಎಂದ
ಮತಗಳ ಸಂಘ ಕಟ್ಟಲಿಲ್ಲ
ಮತಿಹೀನರ ದ್ವೇಷಿಸಲಿಲ್ಲ
ಮನುಜರೆಲ್ಲರೊಂದೆ ಎಂದ
ಪ್ರಶ್ನೆ ಮಾಡು ಎಂದ
ಪ್ರಶ್ನಿಸದೇ ನನ್ನನ್ನೂ ಒಪ್ಪದಿರು ಎಂದ
ಪ್ರಶ್ನಿಸಿ ಸತ್ಯ ಉಳಿಸಿ, ಮಿಥ್ಯ ತೊರೆ ಎಂದ
-ಕೇಶವ ಕಟ್ಟಿಮನಿ, ಗದಗ
*****