ಹಾಸನದ ಯುವ ಕವಯತ್ರಿ ಹೆಚ್.ಸಿ ಭವ್ಯನವೀನ್ ಪತ್ರಿಕೋದ್ಯಮ ಮತ್ತು ಸಾಹಿತ್ಯ ದಲ್ಲಿ ಅಪಾರ ಆಸಕ್ತಿ ಉಳ್ಳವರು.
‘ನಾನು ನಕ್ಷತ್ರ’ ಇವರ ಮೊದಲ ಕವನ ಸಂಕಲನ. ಪ್ರಕಾಶಕಿಯಾಗಿಯೂ(“ಇಷ್ಟ”ಪ್ರಕಾಶನ) ವಿಭಿನ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳಬಲ್ಲ ಭವ್ಯ ನವೀನ್
ತಮ್ಮ ಕವಿತೆಗಳಲ್ಲಿ ಈ ನೆಲದ ಹೆಣ್ಣು ಮಕ್ಕಳ ಅಸಂಖ್ಯ ತೊಳಲಾಟ, ತಲ್ಲಣಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುವ ಕ್ರಮ ಮೆಚ್ಚುಗೆ ಹುಟ್ಟಿಸುವುದರ ಜೊತೆಗೆ ಚಿಂತನೆಗಳಿಗೆ ಎಡೆ ಮಾಡಿಕೊಡುತ್ತವೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಭವ್ಯನವೀನ ಅವರ ‘ಅವಳು’ ಕವಿತೆ ಪಾತ್ರವಾಗಿದೆ. ಓದಿ…ಪ್ರತಿಕ್ರಿಯಿಸಿ..!
‘ಅವಳು’
ಹೊರಗೆ ತಣ್ಣಗಿದ್ದಾಳೆ
ಒಳವುಗಳ ಪ್ರಶ್ನೆ ಏಳಬೇಕಿಲ್ಲ
ಕಣ್ಣುಗಳೋ ಜಲನಿರೋಧಕ
ಕೈ-ಕಾಲುಗಳಿಗೆ ಕೀಲಿ ಕೊಟ್ಟಿಕೊಂಡಿದ್ದಾಳೆ
ತುಟಿಗಳಿಗೆ ಸಿಕ್ಕಿಸಿದ ಕೊಕ್ಕೆಗೆ
ನಗು ಪೇರಿಸಿಕೊಂಡಿದೆ
ಆದರೂ…
ಅವಳು ಗೆಲುವಾಗಿದ್ದಾಳೆ.
೧
‘ಕಲ್ಲೂ ಮಾತಾಡಿಸ್ತಾಳೆ’ ಅನ್ನುವ ಅಪ್ಪ
‘ಗಂಡನ್ನ ಹರಾಜಾಕ್ತಾಳೆ’ ಅನ್ನುವ ಅಮ್ಮ
ನಕ್ಕಷ್ಟೇ ಅತ್ತಹ ಹುಡುಗಿಗೆ
ಅಳುತ್ತಲೇ ನಗುವುದು
ಹುಟ್ಟು ಕರಗತ
೨
ಬೆಳಗಾನ ಎದ್ದು
ಹೊಸಿಲು ತೊಳೆವಾಗ
ಗುಡಿಸಿ ಉಳಿದ ಶನಿಗಸದ
ಒಂದಿಷ್ಟೇ ಧೂಳು ಅಣಕಿಸುತ್ತದೆ
ಬಾಗಿಲ ಲಕ್ಷ್ಮೀ ಹೊರಟೇ ಹೋಗುತ್ತಾಳಂತ
ಅತ್ತೆ ಚುಚ್ಚಿದ್ದು ನೆನಪಾದಾಗ
ಬೆರಳುಗಳೇ ಕಸಬರಿಕೆ
೩
ಹದ ತಪ್ಪಿ ಮೆತ್ತಗಾದ
ಉಪ್ಪಿಟ್ಟಿಗೆ ಕೊಂಚ ಹೆಚ್ಚೇ ಕೇಳಸಿಗುತ್ತದೆ
ತೊಳೆದು ಒರೆಸಿ ಸಾಕಾಗಿ
ಬಂದಾಗ
ಖಾಲಿ ತಪ್ಪಲೆಯೊಳಗಿನ ಚೂರು-ಪಾರು
ಚೀಕು ಕಿಸಕ್ಕನೆ ನಗುತ್ತದೆ
೪
ನಾನು ನಾನಾಗದೇ
ಹಳಬಳಾದಾಗ
ರಾತ್ರಿ ಸಿಗುವ ಗಂಡ ಇನ್ನೂ ಹೊಸಬ
ಮುದುಡಿದ ಹಾಸಿಗೆಯಾದರೂ
ತಬ್ಬಿ ಸಂತೈಸುತ್ತದೆ
ಮುಗಿಸಿ ಮಲಗಿದವನ ಬೆವರ ಹನಿ
ಕಣ್ಣೀರಿಗೆ ಸ್ಪರ್ಧೆಯೊಡ್ಡುತ್ತದೆ.
೫
ಮಗಳ ಟ್ವಿಂಕಲ್ ಟ್ವಿಂಕಲ್..
ಮಗನ ಒಂದೂ.. ಎರಡೂ…
ತಣ್ಣಗೆ ಬದುಕಾಗುತ್ತವೆ
ಗಳಿಸಿದ ಪದವಿಗಳ ಹಳೇ ಪಾಠ
ಒಂದೊಂದೇ ಕೂದಲ ಹಿಡಿದು ಉದುರಿಹೋಗುತ್ತವೆ
ಅವಳು
ಈಗಲೂ ಗೆಲುವಾಗಿದ್ದಾಳೆ
ಗೆಲುವಿಗೆ ಅರ್ಥ ಬದಲಿಸಿದ್ದಾಳಷ್ಟೇ..
-ಎಚ್.ಸಿ ಭವ್ಯನವೀನ್, ಹಾಸನ
*****