ಅನುದಿನ ಕವನ-೨೮೯, ಕವಯತ್ರಿ: ನಾಗರೇಖಾ ಗಾಂವಕರ, ದಾಂಡೇಲಿ, ಕವನದ ಶೀರ್ಷಿಕೆ: ಮುಕ್ತವಾಗಬಹುದೇ?

ಮುಕ್ತವಾಗಬಹುದೇ?

ಹಕ್ಕಿಯ ಕನಸುಗಳಿಗೀಗ ರೆಕ್ಕೆಗಳಿಲ್ಲ
ಮೊನ್ನೆ ಬೀಸಿದ ಬಿರುಗಾಳಿಗೆ
ನೆಲಕಚ್ಚಿದ ಚಪ್ಪರ
ದಡಿಯಲ್ಲೇ ಹೂತುಹೋಗಿದೆ.
ನಮ್ಮಿಬ್ಬರ ಆತ್ಮಗಳ ಮಾತು ಹಕ್ಕಿಯ
ನೆರಿಗೆಗಟ್ಟಿದ ಪುಕ್ಕದಲ್ಲಿ ಹೂತುಹೋಗಿದೆ.

ತೇಲುತ್ತಿದೆ ಹಕ್ಕಿ ರೆಕ್ಕೆಯಿಲ್ಲದೆ
ಬರೀ ಪುಕ್ಕ ಬಡಿಯುತ್ತ
ಏಕಾಂಗಿ ಉಲಿಯುತ್ತ
ತ್ರಿಶಂಕು ಸ್ಥಿತಿ
ಕೆರೆಯಂಚಿನ ಗಿಡಗಳಲ್ಲಿ ಹಕ್ಕಿ
ಬಚ್ಚಿಟ್ಟ ನಮ್ಮಿಬ್ಬರ ವಿರಹದ ನೆರಳು
ಸುಳಿದಾಡುತ್ತಿದೆ.

ಆಕಾಶದ ಅನಂತದೊಂದಿಗೆ
ಬೆಳಕಿನ ಜಾಡು
ಹುಡುಕುವ ಹಕ್ಕಿಯ ಕಣ್ಣುಗಳು
ಜ್ವಾಲೆಗೆ ಮಂಜಾಗಿ
ಹಗಲುಗಣ್ಣು
ಕೋಟೆಕೊತ್ತಲಗಳ ಹಾದಿಯಲ್ಲಿ
ಹಕ್ಕಿ ಹೂತಿಟ್ಟ ನಮ್ಮಿಬ್ಬರ ಹೆಜ್ಜೆಗಳ
ಹಚ್ಚೆ ಮಾಸಿ ಹೋಗುತ್ತಿದೆ.

ಚರಮಗೀತೆ ಹಾಡುತ್ತಿದೆ ಹಕ್ಕಿ
ಗಂಟಲೂದಿ ಉಗ್ಗಡಿಸುತಿದೆ.
ಮುಂಗಾರು ಮಳೆಯ
ಈ ಹೊತ್ತು ನೆಲ ಮುಗಿಲ
ನಡುವಿನಲಿ ಟಿಸಿಲೊಡೆದ
ಮಿಂಚು
ಸಿಡಿಲಿಗೆ ನಮ್ಮಾತ್ಮಗಳು ಮೋಕ್ಷದ ಹಾಡ
ಉಸುರುತ್ತಿವೆ.

ಗೋರಿವಾಕ್ಯದ ಸಾಲುಗಳಲ್ಲಿ ಮಿಂಚುತ್ತಿರುವ
ಭಗ್ನಗೊಂಡ ಮೂರ್ತಿಗಳು ಮಿಲನದ
ಕನಸನ್ನೆಂದೂ ಕಾಣಲಾರವು.

-ನಾಗರೇಖಾ ಗಾಂವಕರ, ದಾಂಡೇಲಿ
*****