ಕಾಗದ ಸಾಂಗತ್ಯ ವೇದಿಕೆ ಆಯೋಜನೆ: ಗಮನ ಸೆಳೆದ ‘ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್’ ಚಿತ್ರಕಲಾ ಸ್ಪರ್ಧೆ

 

ರಾಣೇಬೆನ್ನೂರು, ಅ. 19: ನಗರದ ಕಾಗದ ಸಾಂಗತ್ಯ ವೇದಿಕೆ ಮಕ್ಕಳಿಗಾಗಿ “ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್” ಚಿತ್ರಕಲಾಸ್ಪರ್ಧೆ ಏರ್ಪಡಿಸಿತ್ತು.
ಅರ್ಥಪೂರ್ಣ ಹಾಗೂ ಆಕರ್ಷಕವಾಗಿ ಅಂಚೆಕಾರ್ಡಿನಲ್ಲಿ ಅಂಬೇಡ್ಕರ್ ಚಿತ್ರ ರಚಿಸಿ ಪ್ರಶಸ್ತಿ ಪಡೆದ ಶಿವಮೊಗ್ಗದ ಫೇಸ್ ಯು.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ವೈಷ್ಣವಿ.ಬಿ ಅವರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ರಾಣೆಬೆನ್ನೂರು ಸಮೀಪದ ನಂದಿಗಾವಿ ಗ್ರಾಮದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಮಠದ(ಶ್ರಿ ಗುರು ಕೊಟ್ರಪ್ಪಜ್ಜನ ಗದ್ದುಗೆ) ಆವರಣದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಕವಿ, ಅಧ್ಯಾಪಕ ದೇವರಾಜ ಹುಣಸಿಕಟ್ಟಿ ಅವರು ಮಾತನಾಡಿ, ಕೊರೋನಾ ಕಾಲದಲ್ಲಿ ಮುನ್ನಲೆಗೆ ಬಂದ ಆನ್‌ಲೈನ್ ಶಿಕ್ಷಣ ಮಕ್ಕಳಿಗೆ ಪೂರಕವು ಹೌದು, ಎಚ್ಚರ ತಪ್ಪಿದರೆ ಮಾರಕವು ಹೌದು ಎಂದು ಅಭಿಪ್ರಾಯಪಟ್ಟರು.
ಆನ್‌ಲೈನ್ ಮೂಲಕ ಚಿತ್ರಕಲೆಯ ಹೊಸಸಾಧ್ಯತೆಗಳನ್ನು
ವಿದ್ಯಾಥಿಗಳಿಗಳಲ್ಲಿ ಅನಾವರಣಗೊಳಿಸಲು ಸಾಧ್ಯವಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅವಶ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಸ್ಥಾಪಕ, ಅಧ್ಯಕ್ಷ ನಾಮದೇವ ಕಾಗದಗಾರ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಗೆ ಪೋಷಕರು ಮತ್ತು ಗುರುಗಳ ಪಾತ್ರ ಅನನ್ಯ ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಕಲಾಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಂಡರೇ ಸಾಲದು. ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ನಿರಂತರ ಕಲಿಕೆಯ ಪ್ರಕ್ರಿಯೆ. ಕಲಾಶಿಕ್ಷಣ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳಿಗೆ ಮೂರ್ತ ಸ್ವರೂಪವನ್ನು ಸೃಷ್ಟಿಸುತ್ತದೆ ಮಾತ್ರವಲ್ಲ,
ಸ್ಮರಣ ಶಕ್ತಿ ಹೆಚ್ಚಿಸುವುದಲ್ಲದೇ ರೂಪರಚನಾ ಸಾಮರ್ಥ್ಯ ಕಡಿಮೆ ಇರುವ ಹಾಗೂ ಬೌದ್ಧಿಕವಾಗಿ ಮಂದವಾಗಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ನಾಮದೇವ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಿ.ಭೀಮೇಶ, ದೀಪಾ.ಪಿ, ವರ್ಷಿಣಿ.ಬಿ, ಕೃಷ್ಣಮೂರ್ತಿ ಬಳಿಗಾರ ಮುಂತಾದವರು ಉಪಸ್ಥಿತರಿದ್ದರು.
*****