ಅನುದಿನ ಕವನ-೨೯೦, ಕವಯತ್ರಿ: ಭಾರತಿ ಕೇದಾರಿ ನಲವಡೆ, ಹಳಿಯಾಳ, ಕವನದ ಶೀರ್ಷಿಕೆ: ನಮ್ಮ ನಾಡು ಶ್ರೇಷ್ಠ

ನಮ್ಮ ನಾಡು ಶ್ರೇಷ್ಠ

ದೇಶ ಭಾಷೆ ಧರ್ಮ ಜಾತಿಯಲಿದೆ ಭಿನ್ನತೆ
ಮನಮನಗಳಲಿ ಮಥಿಸಿದೆ ಭಾವೈಕ್ಯತೆ
ಜನ್ಮಭೂಮಿಯ ರಕ್ಷಣೆಗಿದೆ ಅನ್ಯೋನ್ಯತೆ
ಕನ್ನಡಿಗರ ವೀರ ಪರಂಪರೆಗಿದೆ ಯಶೋಗಾಥೆ //

ಕವಿಪುಂಗವರ ಸಾಹಿತ್ಯ ಕೊಡುಗೆಯ ಪುಣ್ಯಭೂಮಿ
ಪ್ರಾಮಾಣಿಕತೆಯ ದೇಶಭಕ್ತಿ ಮೆರೆದ ಕರ್ಮಭೂಮಿ
ರಾಜಮಹಾರಾಜರ ಪರಾಕ್ರಮದಿ ನಲಿದ ಧರ್ಮಭೂಮಿ
ಎಲ್ಲಕ್ಕಿಂತ ಮಿಗಿಲಾಗಿದೆ ನಮ್ಮ ನಾಡು ಶ್ರೇಷ್ಠ //

ನದಿತೊರೆಕಡಲಿನ ಧಾರೆಯ ರಮ್ಯತೆಯ ಬೀಡು
ಹಚ್ಚಹಸಿರಾಗಿವೆ ಪ್ರಾಣಿ-ಪಕ್ಷಿಗಳ ಆಶ್ರಯದ ಕಾಡು
ಕಲೆ ವಾಸ್ತುಶಿಲ್ಪದ ತೊಟ್ಟಿಲಾಗಿದೆ ದೇಶ ನೋಡು
ಅಭಿಮಾನಪಡುವ ಸುಂದರವಾದ ಈ ತಾಯಿನಾಡು //

ಕೋಮುಗಲಭೆಯ ದಳ್ಳುರಿಯ ಅಟ್ಟಹಾಸದಿ ಮೆಟ್ಟಿ
ನನ್ನ ದೇಶ ನನ್ನ ಜನ ಎಂಬ ಸ್ವಾಭಿಮಾನವ ತಟ್ಟಿ
ಕರ್ನಾಟಕದ ಅಭ್ಯುದಯಕೆ ಒಂದಾಗಲು ಟೊಂಕ ಕಟ್ಟಿ
ಮರು ಜನ್ಮದಲೂ ನಾನು ಇಲ್ಲಿ ಬರಬೇಕು ಹುಟ್ಟಿ //

ವ್ಯಕ್ತಿಗಿಂತ ನಾಡುದೊಡ್ಡದೆನ್ನುವ ಆತ್ಮಾಭಿಮಾನ
ಇರಬೇಕು ನಾಡಿನೊಳಿತಿಗೆ ನಮ್ಮ ಸದಭಿಮಾನ
ವಿಶ್ವಪಥದೆಡೆಗೆ ಸಾಗುವ ತೊರೆದು ಬಿಗುಮಾನ
ಮನುಜಮತಕಿರಲಿ ಅರಿತು ಬಾಳುವ ಜಾಯಮಾನ//

-ಭಾರತಿ ಕೇದಾರಿ ನಲವಡೆ
ಹಳಿಯಾಳ


*****