“ಇದು ವಿಭ್ರಾಂತ ಹೃದಯದ ಕವಿತೆ. ವಿಷಾದ ಮನಸಿನ ಭಾವಗೀತೆ. ನಾವು-ನೀವು ಎಲ್ಲರೂ ಒಂದಿಲ್ಲೊಮ್ಮೆ ಅನುಭವಿಸಿರುವ ತಲ್ಲಣಗಳ ಕತೆಯಿದು. ಒಮ್ಮೊಮ್ಮೆ ನಿರ್ಲಿಪ್ತವಾದ ಆಂತರ್ಯ ರಿಂಗಣಿಸುವ ವ್ಯಥೆಯಿದು. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ವಿಷಾದ..!
ಮೌನವಾಗಿದ್ದೇನೆಂದರೆ…
ಮಾತುಗಳಿಲ್ಲವೆಂದಲ್ಲ.!
ಗಂಟಲುಬ್ಬಿ ಆಚೆಗೆ
ನುಡಿಗಳೇ ಬರುತ್ತಿಲ್ಲ.!
ವೃಥಾ ಮಾತುಗಳನಾಡಿ
ಸಾಧಿಸುವುದಾದರೂ ಏನು.?
ಭಾಷೆಯದು ಭಾವಗಳ
ಅಭಿವ್ಯಕ್ತಿಸದಾದಾಗ..!
ಮುಗುಳ್ನಗುತ್ತಿದ್ದೇನೆಂದರೆ…
ನೋವುಗಳಿಲ್ಲವೆಂದಲ್ಲ.!
ಒಡಲಾಳ ಸೊರಗಿ
ಬಿಕ್ಕುವುದು ಆಗುತ್ತಿಲ್ಲ.!
ನೋವುಗಳ ಹರವಿ
ಮಾಡುವುದಾದರೂ ಏನು.?
ಜಗದ ಕಂಬನಿಯೂ
ಮನ ತಣಿಸದಾದಾಗ..!
ಕಣ್ಮುಚ್ಚಿದ್ದೇನೆಂದರೆ…
ಎಚ್ಚರವಿಲ್ಲವೆಂದಲ್ಲ.!
ಕಂಗಳ ತೆರೆಯಲು
ಮನಸೇ ಆಗುತ್ತಿಲ್ಲ.!
ಸುಮ್ಮನೇ ಕಣ್ತೆರೆದು
ಆಗುವುದಾದರೂ ಏನು.?
ಬೆಳಕಿನ ಕಿರಣಗಳೇ
ಕಾಣದಾಗಿರುವಾಗ.
-ಎ.ಎನ್. ರಮೇಶ್, ಗುಬ್ಬಿ
***”*