ಸಾಹಿತಿ, ರಂಗ ಕರ್ಮಿ, ಉಪನ್ಯಾಸಕ ಡಾ.‌ಸಿದ್ರಾಮ ಕಾರಣಿಕ ಇನ್ನಿಲ್ಲ

ಜಮಖಂಡಿ, ಅ.21: ಸಾಹಿತಿ, ರಂಗ ಕರ್ಮಿ, ಚಲನ ಚಿತ್ರ ನಟ, ಉಪನ್ಯಾಸಕ ಡಾ.‌ಸಿದ್ರಾಮ ಕಾರಣಿಕ ಅವರು ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಅವರಿಗೆ 46 ವರ್ಷವಾಗಿತ್ತು. ಪತ್ನಿ, ಏಕೈಕ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಎದೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ, ಹೃದಯಾಘಾತದಿಂದ ನಿಧನರಾಗಿದ್ದಾರೆ ತಿಳಿಸಿದ್ದಾರೆ.
ಸ್ವಂತ ಊರು ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಸಂಜೆ ಅಂತಿಮ ಸಂಸ್ಕಾರ ನೆರವೇರಿತು ಎಂದು ಕುಟುಂಬದ ಸದಸ್ಯ ರಾಜು ಸಂಕನ್ನವರ್ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.


ತಮ್ಮ ಬಹುಮುಖಿ ವ್ಯಕ್ತಿತ್ವದ ಮೂಲಕ ಜನಪ್ರಿಯರಾಗಿದ್ದ ಡಾ. ಕಾರಣಿಕ ಅವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಾರರಾಗಿ, ರಂಗಕರ್ಮಿಯಾಗಿ ವಿಶಿಷ್ಟ ಛಾಪು ಮೂಡಿಸಿದ್ದರು.
ಬಾಬಾಸಾಹೇಬ್ ಡಾ.‌ಬಿ ಆರ್ ಅಂಬೇಡ್ಕರ್ ಅವರನ್ನು ಆಳವಾಗಿ ಅಧ್ಯಯನ ಮಾಡಿದ್ದ ಡಾ. ಕಾರಣಿಕ ಅವರು ದಲಿತ ಲೋಕಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದರು. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.


ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದ್ದ ಮಿಸೆಸ್ ಅಂಬೇಡ್ಕರ್ ರಂಗ ಕೃತಿ ಹಲವು ಪ್ರದರ್ಶನ ಕಂಡಿತ್ತು. ಇದೇ ರಂಗಕೃತಿ ಆಧಾರಿಸಿ ಚಲನಚಿತ್ರವಾಗಿ ತೆರೆಕಂಡಿತ್ತು. ಡಾ. ಕಾರಣಿಕ ಅವರೇ ಡಾ.‌ಅಂಬೇಡ್ಕರ್ ಪಾತ್ರವನ್ನು ನಿರ್ವಹಿಸಿದ್ದರು. ರಂಗದಲ್ಲೂ ಇವರೇ ಬಾಬಾಸಾಹೇಬರ. ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ಗಮನ ಸೆಳೆದಿದ್ದರು.
ಲಡಾಯಿ ಪ್ರಕಾಶನ ಸೇರಿದಂತೆ ನಾಡಿನ ಹಲವು ಪ್ರಕಾಶನ ಸಂಸ್ಥೆಗಳು ಇವರ ಕೃತಿಗಳನ್ನು ಪ್ರಕಟಿಸಿವೆ. ಧಾರವಾಡ ವಿವಿಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದ. ಡಾ.ಕಾರಣಿಕ ಅವರು ವರ್ಷದ ಹಿಂದೆ ಜಮಖಂಡಿಯ ಅನುದಾನಿತ ಕಾಲೇಜಿನ ಉಪನ್ಯಾಸಕರಾಗಿ ಆಯ್ಕೆಯಾಗಿದ್ದರು.


ಬಳ್ಳಾರಿಯಲ್ಲಿ ಪ್ರದರ್ಶನಗೊಂಡ ಮಿಸೆಸ್ ಅಂಬೇಡ್ಕರ್ ಕೃತಿ ಬಿಡುಗಡೆ, ನಾಟಕ ಪ್ರದರ್ಶನ ಉದ್ಘಾಟಿಸಿದ್ದ ಪ್ರಸಿದ್ಧ ರಂಗಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರು, ಅಂಬೇಡ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡು ಮನೋಜ್ಞವಾಗಿ ಅಭಿನಯಿಸಿದ್ದ ಡಾ. ಸಿದ್ರಾಮ ಕಾರಣಿಕ ಅವರ ರಂಗ ಪ್ರತಿಭೆಯನ್ನು ಮೆಚ್ಚಿ ಮನದುಂಬಿ ಹರಸಿದ್ದರು. ಬಳಿಕ ಸನ್ಮಾನಿಸಿ ಗೌರವಿಸಿದ್ದರು.
ಸಂತಾಪ: ಡಾ. ಸಿದ್ರಾಮ ಕಾರಣಿಕ ಅವರು ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ನಂಬಲಾಗುತ್ತಿಲ್ಲ. ಅವರ ನಿಧನದಿಂದ ದಲಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವು ಬಡವಾಗಿದೆ ಎಂದು ಹಿರಿಯ ಪತ್ರಕರ್ತ ಬಿಜಾಪುರ ಅನಿಲ್ ಹೊಸಮನಿ ಅವರು ಸಂತಾಪ ವ್ಯಕ್ತಪಡಿಸಿದ್ಸಾರೆ.
ಡಾ. ಸಿದ್ರಾಮ ಕಾರಣಿಕ ಅವರು ಭೌತಿಕವಾಗಿ ಇಲ್ಲದಿದ್ದರೂ ಬಾಬಾಸಾಹೇಬರ ಚಳುವಳಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದ್ದಾರೆ.
ಕಂಬನಿ: ಡಾ. ಕಾರಣಿಕ ಅವರ ನಿಧನಕ್ಕೆ ಕರ್ನಾಟಕ ಮಾಧ್ಯಮ‌ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ, ಬಳ್ಳಾರಿ ಸಂಸ್ಕೃತಿ ಪ್ರಕಾಶನದ ಸಿ.‌ಮಂಜುನಾಥ್ ಅವರು ಕಂಬನಿ ಮಿಡಿದಿದ್ದಾರೆ. ಸರಳ, ಸಜ್ಜನಿಕೆಯ ಪ್ರತಿಭಾವಂತ ಸಾಹಿತಿ, ರಂಗ ಕರ್ಮಿ, ಹೋರಾಟಗಾರರನ್ನು ನಾಡು ಕಳೆದು ಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತಿಗಳು, ಸಹೋದ್ಯೋಗಿಗಳು, ರಂಗ ಕರ್ಮಿಗಳು ಸೆರಿದಂತೆ ನೂರಾರು ಜನ ಡಾ. ಕಾರಣಿಕ ಅವರ ಅಕಾಲಿಕ ನಿಧನಕ್ಕೆ ಮರುಗಿ, ಸಂತಾಪ ವ್ಯಕ್ತಪಡಿಸಿದ್ದಾರೆ.                                      *****