ಅನುದಿನ ಕವನ-೨೯೨, ಕವಿ: ಡಾ.ಸಿದ್ರಾಮ ಕಾರಣಿಕ, ರಾಯಭಾಗ ಕವನದ ಶೀರ್ಷಿಕೆ:ಮೋಡ ಕಟ್ಟೇತಿ….

ಬಹುಮುಖಿ ಡಾ. ಸಿದ್ರಾಮ‌ ಕಾರಣಿಕ ಅವರು ಹೃದಯಾಘಾತದಿಂದ ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ ಕವಿ ಬಳಗದಲ್ಲಿದ್ದ ಡಾ. ಕಾರಣಿಕ ಅವರ ನಿಧನದಿಂದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕವಿ ಕಾರಣಿಕ ಅವರ ‘ಮೋಡ ಕಟ್ಟೇತಿ….’ ಕವನ ಪ್ರಕಟಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ….👇

ಮೋಡ ಕಟ್ಟೇತಿ….

ಮೋಡ ಕಟ್ಟೇತಿ ಮುಗಿಲಾಗ
ಮೋಡ ಕಟ್ಟೇತಿ
ಮಳೆ ಇಳಿತದೋ ಇಲ್ಲ
ಗಾಳಿ ಸೆಳಿತದೋ

ಸಣ್ಣ ಮಿಂಚು ತೆರೆಯ ಸರಿಸಿ
ದಿಟ್ಟಿ ನೆಟ್ಡೇತಿ
ಗುಡುಗಿನ ಸಪ್ಪಳ ದಪ್ಪಿನ್ಹಾಂಗ
ಧಿಮಿತಕಗುಟ್ಟೇತಿ

ನೆಲಾ ಒಣಗಿ ಬಲಾ ಬತ್ತಿ
ಬಾಯಿ ಬಿಟ್ಟೇತಿ
ಬಿಸಿಲು ಗಾಳಿಯ ಬೆನ್ನ ಏರಿ
ಪಂಥ ಕಟ್ಟೇತಿ

ಹೊಸ ಹಾಡಿಗೀ ಹೊಸ ರಾಗ
ತಾಳ ಕಟ್ಟೇತಿ
ರಸಭಾವಕ ಉಸಿರ ತುಂಬಲು
ಕರೆಯ ಕೊಟ್ಟೇತಿ

– ಡಾ. ಸಿದ್ರಾಮ ಕಾರಣಿಕ, ರಾಯಭಾಗ
*****