ಕರ್ನಾಟಕ ಕಂಡ ಹೆಮ್ಮೆಯ ಪೊಲೀಸ್ ಹುತಾತ್ಮ ಎಂ ಸಿ ಹನುಮಂತಪ್ಪ

[ವಿಶೇಷ ವರದಿ: ಸಿ.ಮಂಜುನಾಥ್]
ಬಳ್ಳಾರಿ, ಅ.೨೧:ಕರ್ತವ್ಯ ನಿರ್ವಹಣೆಯಲ್ಲಿ ವೀರಮರಣವನ್ನು ಅಪ್ಪಿರುವ ಪೊಲೀಸ್ ಹುತಾತ್ಮರಿಗೆ ಪ್ರತಿವರ್ಷ ಅ. ೨೧ರಂದು ಶ್ರದ್ಧಾಪೂರ್ವಕವಾಗಿ ಗೌರವ ಸಮರ್ಪಿಸಲಾಗುತ್ತಿದೆ.
ಪೊಲೀಸ್ ಸಂಸ್ಮರಣ ದಿನಾಚರಣೆಯ ಈ ಸಂದರ್ಭದಲ್ಲಿ ಕನ್ನಡಿಗರು ವಿಶೇಷವಾಗಿ ಬಳ್ಳಾರಿಗರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದವರು ಪೊಲೀಸ್ ಹುತಾತ್ಮ ಎಂ.ಸಿ ಹನುಮಂತಪ್ಪ ಅವರು.


೧೯೯೦ರಲ್ಲಿ ಬಳ್ಳಾರಿ ಸಮೀಪದ ಮುಂಡರಗಿ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ಆಂಧ್ರ‍್ರಪ್ರದೇಶದ ಕುಖ್ಯಾತ ಭಯೋತ್ಪಾದಕ ಭೀಮ್ಲನಾಯಕನ ಮೇಲೆ ನಡೆದ ಪೊಲೀಸ್ ದಾಳಿಯ ಗುಂಡಿನ ಚಕಮಕಿಯಲ್ಲಿ ಭೀಮ್ಲನಾಯ್ಕನ ಗುಂಡಿನಿಂದ ಮರಣಾಂತಿಕವಾಗಿ ಗಾಯಗೊಂಡು ಸತತ ಹತ್ತು ದಿನ ಜೀವನ್ಮರಣದ ಹೋರಾಟ ನಡೆಸಿ ವೀರ ಮರಣ ಅಪ್ಪಿದವರೇ ಹನುಮಂತಪ್ಪ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಎಂ.ಸಿ. ಹನುಮಂತಪ್ಪ ಅವರು ಬಡರೈತ ಕುಟುಂಬದ ಕುಡಿ. ಬಡತನವಿದ್ದರೂ ಇವರ ತಂದೆ ಸಿ.ಚನ್ನಬಸಪ್ಪ ಅವರು ಮಗನನ್ನು ಕಾಲೇಜ್ ಕಟ್ಟೆ ಹತ್ತಿಸುವಲ್ಲಿ ಯಶಸ್ವಿಯಾಗಿದ್ದರು.
ಹನುಮಂತಪ್ಪ ಅವರ ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು ನನಸಾಯಿತು. ಜಿಲ್ಲೆಯ ಹಲವು ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರಳ ಸಂಪನ್ನರಾಗಿದ್ದರೂ ಸಾಹಸ ಕಾರ್ಯಗಳಲ್ಲಿ ಸದಾ ಮುಂದು. ಈ ಕಾರಣದಿಂದಲೇ ಮಹತ್ವದ ಆಪರೇಷನ್ ಕಾರ್ಯದ ತಂಡದಲ್ಲಿ ಇವರೂ ಸ್ಥಾನ ಪಡೆದರು. ೧೯೯೦ ಸೆಪ್ಟೆಂಬರ್ ೧೫ರಂದು ಬೆಳಗಿನ ಜಾವ ೫ ಗಂಟೆಗೆ ಆಂದ್ರದ ಕುಖ್ಯಾತನನ್ನು ಬಂಧಿಸಲು ಹೊರಟ ಅಂದಿನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಬಿದರಿ ನೇತೃತ್ವದ ೧೫ ಜನರ ತಂಡದಲ್ಲಿ ಹನುಮಂತಪ್ಪ ಅವರು ಸ್ಥಾನ ಪಡೆದು ಮಂಚೂಣಿಯಲ್ಲಿದ್ದರು.
ಖಚಿತ ಮಾಹಿತಿ ಪಡೆದ, ಸಶಸ್ತ್ರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ತಂಡ ಕುಖ್ಯಾತ ಭೀಮ್ಲನಾಯ್ಕ ಅಡಗಿದ್ದ ತೋಟದ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯುತ್ತದೆ. ಧೈರ್ಯದಿಂದ ಮನೆಯ ಒಳಗೆ ನುಗ್ಗಿದ ಹನುಮಂತಪ್ಪ ಅವರ ಮೇಲೆ ಭೀಮ್ಲನಾಯಕ ಗುಂಡು ಹಾರಿಸಿದಾಗ ತೀವ್ರಗಾಯಗೊಳ್ಳುತ್ತಾರೆ. ತಕ್ಷಣ ಅಧಿಕಾರಿಗಳು ಭೀಮ್ಲನಾಯ್ಕನ ಮೇಲೆ ಗುಂಡುಹಾರಿಸಿ ಹತ್ಯೆ ಮಾಡುತ್ತಾರೆ.
ಮರಣಾಂತಿಕವಾಗಿ ಗಾಯಗೊಂಡ ಹನುಮಂತಪ್ಪ, ಗಾಯಗೊಂಡ ಇತರೆ ಸಿಬ್ಬಂದಿಗಳನ್ನು ನಗರದ ಮೆಡಿಕಲ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸುತ್ತಾರೆ. ಹನುಮಂತಪ್ಪ ಅವರ ದೇಹದಲ್ಲಿದ್ದ ಮೂರು ಗುಂಡುಗಳಲ್ಲಿ ಎರಡನ್ನು ಆಪರೇಷನ್ ನಡೆಸಿ ವೈದ್ಯರು ತೆಗೆದು ಚಿಕಿತ್ಸೆ ನೀಡುತ್ತಾರಾದರೂ ಹತ್ತುದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿ ಅಂತಿಮವಾಗಿ ಹುತಾತ್ಮರಾಗುತ್ತಾರೆ.
ಪ್ರಾಣವನ್ನು ಲೆಕ್ಕಿಸದೇ ಧೈರ್ಯ ಸಾಧನೆ ತೋರಿದ ಎಸ್ಪಿ ಬಿದರಿ ಮತ್ತು ಹನುಮಂತಪ್ಪ ಅವರಿಗೆ ಮರಣೋತ್ತರವಾಗಿ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸುತ್ತದೆ. ಇತರ ಅಧಿಕಾರಿ ಸಿಬ್ಬಂದಿಗಳಿಗೆ ಬೆಳ್ಳಿ ಕಂಚಿನ ಪದಕ ನೀಡಿ ಗೌರವಿಸಲಾಗುತ್ತದೆ.


ಧೈರ್ಯ ಮೆರೆದು ಹುತಾತ್ಮರಾದ ಹನುಮಂತಪ್ಪ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಅವರ ಪೊಲೀಸ್ ಶೌರ್ಯ ಪದಕದ ಜತೆ ಆಂದ್ರಪ್ರದೇಶ ಸರಕಾರವು ಶೌರ್ಯ ಪದಕ ನೀಡಿ ಸತ್ಕರಿಸುತ್ತದೆ.
ಪೊಲೀಸ್ ಸಂಸ್ಮರಣ ದಿನದಂದು ಹುತಾತ್ಮ ಹನುಮಂತಪ್ಪ ಅವರ ಪತ್ನಿ ಶ್ರೀಮತಿ ಕಮಲಮ್ಮ ಅವರನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಮಾತನಾಡಿಸಿದಾಗ ‘ನಮ್ಮ ಮನೆಯವರು ಕರ್ತವ್ಯದಲ್ಲಿದ್ದಾಗ ವೀರ ಮರಣವನ್ನು ಅಪ್ಪಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ ಇದೆ. ನಾಲ್ಕು ಜನ ಮಕ್ಕಳನ್ನು ಸಾಕಿ ಸಲುಹಲು ಪಟ್ಟ ಕಷ್ಟವೂ ನಮ್ಮವರ ತ್ಯಾಗದ ಮುಂದೆ ಏನೇನು ಅಲ್ಲ. ಹುತಾತ್ಮ ಪೊಲೀಸ್ ಪತ್ನಿಯಾಗಿರುವುದಕ್ಕೆ ಸಂತೋಷ ಪಡುತ್ತೇನೆ’ ಎಂದು ಹೇಳಿದರು.
ಪುತ್ರರಾದ ಎಂ.ಸಿ ಮಂಜುನಾಥ್, ಎಂ.ಸಿ ರವಿಕುಮಾರ್, ಎಂ.ಸಿ ವಾಸು ಮತ್ತು ಪುತ್ರಿ ಮಮತ ಅವರಿಗೂ ಬಾಲ್ಯದಲ್ಲಿಯೇ ತಮ್ಮ ತಂದೆಯ ಪ್ರೀತಿಯನ್ನು ಕಳೆದುಕೊಂಡ ಕೊರಗಿದ್ದರೂ ದೇಶಕ್ಕಾಗಿ ನಮ್ಮ ತಂದೆಯವರ ತ್ಯಾಗ ಬಲಿದಾನ ನಮಗೆ ಹೆಮ್ಮೆ ಎಂದು ತಿಳಿಸುತ್ತಾರೆ.
ತಮ್ಮ ೪೨ರ ಹರೆಯದಲ್ಲಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಹನುಮಂತಪ್ಪ ಅವರ ಸೇವೆಯನ್ನು ಕನ್ನಡ ನಾಡು ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಜನತೆ ಮೂವತ್ತೊಂದು ವರ್ಷದ ಬಳಿಕವೂ ಕೊಂಡಾಡುತ್ತಿದೆ.


——-