ಅನಾಮಿಕ ಮತ್ತು ದೇವರು
ದಿಕ್ಕುಗಾಣದ ದಾರಿ
ದಾರಿಗುಂಟ ದಿಗಿಲು
ಕ್ಷಿತಿಜದಿಂದೇಳುವ ಗಿಳಿಹಸಿರು ಮೋಡ
ಎಂಥ ಬೆರಗಿದು ಇಲ್ಲಿ
ದಕ್ಷಿಣ ಧ್ರುವವೋ ಉತ್ತರ ಧ್ರುವವೋ
ಯಾರನ್ನು ಕೇಳುವುದೀಗ
ಗಬಕ್ಕನೆ ಸಕ್ಕರೆ ನಿದ್ದೆಯಿಂದೆದ್ದ ಅನಾಮಿಕನ ಮುಖಾರವಿಂದದಿ
ಪ್ಯಾಲಿ ನಗು
ಹೆಂಡತಿ ಕೇಳಿದಳು, ‘ಏನಿದು ಹೀಗೆ?’
ಸಾವಕಾಶ ಎದ್ದ ಅನಾಮಿಕ ಹೊರನಡೆದ ಬಾಗಿಲು ತೆರೆದು
ಆರಿಸುತ್ತ ಮನೆಯ ಬೆಳಕನೆಲ್ಲ
ಧಾವಿಸಿದ ಬಯಲಿಗೆ
ಹಿತ್ತಲ ಅಗುಳಿ ತೆಗೆದು
…….
ಒಂದಾನೊಂದು ಕಾಲದಲ್ಲಿ
ಸ್ನೇಹವಿತ್ತಂತೆ,
ದೇವರಿಗೂ ಅನಾಮಿಕನಿಗೂ
ತಾಸುಗಟ್ಟಲೆ ಹರಟೆ ಗಿಡದ ನೆರಳಿಗೆ
ದಿನವಿಡೀ ಕೇಕೆ ಕೈ ಕೈ ಬಡಿದು
ಮಾತೇ ಮಾತು ರಾತ್ರಿಯಿಡೀ
ತುತ್ತ ತುದಿಯೇರಿ ಬೆಟ್ಟವ
ಲೋಕದ ಬೆರಗ ನೋಡಿ
ಕೋಗಿಲೆಯಂತೆ ಕೂಹೂ ಕೂಹೂ
ಕೂಗಿ ಕೂಗಿ ಕೂಗೊಂದಾಗಿ
ಮನವೊಂದಾಗಿ ತನುವೊಂದಾಗಿ
………
ಮೈತುಂಬ ಗಾಯವೀಗ ಅನಾಮಿಕನಿಗೆ
ಪದೇ ಪದೇ ಹೆಂಡತಿಯ ಅಚ್ಚರಿಯ ಸೊಲ್ಲು
‘ಏನಿದು ಹೀಗೆ ಮೈತುಂಬ?!’
ಒಂದೇ ಉಸಿರು ಅನಾಮಿಕನ ಬಾಯಿಂದ
‘ಪಾಪ!, ಪಾಪ!, ಪಾಪ!’
ಇತ್ತೀಚೆಗೆ ಕಣ್ಣಿಗೆ ಕಂಡರೆ ಸಾಕು ಈ ಅನಾಮಿಕ
‘ರಾಜ್ಯ’ ‘ಸಾಮ್ರಾಜ್ಯ’
ಎಂದೆಲ್ಲಾ ಕರೆವರು ಅವನ
ಅದಕ್ಕವನು ‘ಕ್ಷಣಭಂಗುರತೆ’ ಎಂದು ನಗುತ್ತ
ಮುಂದೆ ನಡೆವನು ಸುಮ್ಮನೆ
ಬಾಗಿಲು ಹಿಕ್ಕಿ ಮಲಗಿಬಿಡುವರು ಜನ
ಉದ್ದನೆಯ ಗಡ್ಡ ಊದಿಕೊಂಡ ಕಣ್ಣು
ಹುಣ್ಣು ಹುಣ್ಣಾದ ಮೈಯ್ಯ ನೋಡಿ
ದಿಗಿಲೇಳುವ ಹೆಂಡತಿಯಿಂದ ಅಡಗಿಕೊಳ್ಳಲೆಂದೇ
ಪ್ರತಿ ರಾತ್ರಿಗೂ ಬಯಲಿಗಿಳಿವ ಅನಾಮಿಕ
ಇಂದೇನು ಮಾಡಿಯಾನು?
ತೇಕುತ್ತಾ ಓಡುತ್ತಿದ್ದವನೆದುರು
ಪ್ರತ್ಯಕ್ಷನಾದ ದೇವರು!
ಭಗ್ನಗೊಳಿಸಿ ತಳಮಳವನೆಲ್ಲ
ಹುಣ್ಣುಗಳ ತೊಳೆದು ಬೆಂಕಿಯ ಮಳೆಗೆ
ಬೆಂದು ಬೆಂದು ಈ ಘೋರ ರಾತ್ರಿಯ ಬಾಳಿಗೆಯ ತಳದಿ
ಬೆಂದೆದ್ದು ದಿಢೀರನೆ ಬಂದು
ಬಾಗಿಲ ಹಿಂದವಿತ ಅನಾಮಿಕ
ಹಲ್ಲು ಕಿಸಿದ! ಹೆಂಡತಿಯ ನೋಡಿ
ಲೋಕದ ಮೇಲೆ ‘ಭಯ’ ಹುಟ್ಟಿ ಹೊಸದೊಂದು
ಸೇರಿದಳು ಮಲಗುವ ಕೋಣೆಯ
ಭದ್ರವಾಗಿ ಜಡಿದು ಅಗುಳಿಯ
ಅನಾಮಿಕನ ಕಂಡರೆ ಈಗ
‘ಭಯ’ ಎಂದು ಕರೆವರು ಜನ
ಅದಕ್ಕವನು ‘ಕ್ಷಣಭಂಗುರತೆ’ ಎನ್ನುತ್ತಲೇ
ಮುಂದೆ ನಡೆವನು
ಎಂದಿನಂತೆ ಮಲಗುವರು ಜನ ಬಾಗಿಲಿಗೆ ಜಡಿದು ಅಗುಳಿಯ
ಜನವಿಲ್ಲ ಗುಣವಿಲ್ಲ
ಹೆಂಡತಿಯಿಲ್ಲ ಮಕ್ಕಳಿಲ್ಲ ಪ್ರೇಮವಿಲ್ಲ
ರಾಜ್ಯವಿದೆ ಸಾಮ್ರಾಜ್ಯವಿದೆ
ಅನಾಥ ಅನಾಮಿಕನಿಗೀಗ!
ಭಯಭೀತಗೊಳಿಸಲು ಹಲ್ಲು ಕಿಸಿದು ಕತ್ತಲಿದೆ ಸಾಕಷ್ಟು
-ಭುವನಾ ಹಿರೇಮಠ, ಬೆಳಗಾವಿ
*****