ಕ್ರಾಂತಿಕಾರ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಅವರ ಪುಣ್ಯಸ್ಮರಣೆ: ಮಲಾಮರಡಿಯಲ್ಲಿರುವ ಪುತ್ಥಳಿಗೆ ಗೌರವ ಸಲ್ಲಿಸಿದ ಗಣ್ಯರು

ಬೆಳಗಾವಿ, ಅ.23: ಕನ್ನಡದ ಕ್ರಾಂತಿಕಾರ ಕಾದಂಬರಿಕಾರರೆಂದೇ ಪ್ರಖ್ಯಾತರಾಗಿರುವ ಬಸವರಾಜ ಕಟ್ಟೀಮನಿ ಅವರ ಮಹಾ ನಿರ್ಗಮನದ ದಿನವಾದ ಇಂದು(ಅ.23) ಹುಟ್ಟೂರಾದ ಮಲಾಮರಡಿಗೆ ಹಿರಿಯ ಪತ್ರಕರ್ತ, ಸಾಹಿತಿ ಸರಜೂ ಕಾಟ್ಕರ್ ಮತ್ತಿತರ ಗಣ್ಯರು ತೆರಳಿ ಗೌರವ ಸಲ್ಲಿಸಿದರು.
ಮಲಾಮರಡಿಗೆ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಶಿರೀಷ ಜೋಷಿ, ಡಾ ಎ.ಬಿ. ಘಾಟಗೆ, ಪ್ರೊ ಚಂದ್ರಶೇಖರ ಅಕ್ಕಿ, ಶಿವಕುಮಾರ ಕಟ್ಟೀಮನಿ ಹಾಗೂ ರಾಯನಗೌಡರ್ ಶನಿವಾರ ಭೇಟಿ ನೀಡಿ ಬಸವರಾಜ ಕಟ್ಟೀಮನಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


ಈ ಕುರಿತಂತೆ ಭಾವುಕರಾಗಿ ಮಾಹಿತಿ ನೀಡಿರುವ ಸರಜೂ ಕಾಟ್ಕರ್ ಅವರು, ಇತ್ತೀಚಿಗೆ ಪ್ರಕಟವಾದ ನನ್ನ ನಾಲ್ಕು ಪುಸ್ತಕಗಳನ್ನು ಅವರ ಪುತ್ಥಳಿ ಎದುರು ಇಟ್ಟು ನಮಸ್ಕರಿಸಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಕಟ್ಟೀಮನಿ ಮತ್ತು ನಿರಂಜನ ಅವರ ಸಾಹಿತ್ಯದಿಂದ ಪ್ರಭಾವಿತನಾದವನು. ನನ್ನ ಬರವಣಿಗೆಯಲ್ಲಿ ಇವರಿಬ್ಬರ ಪ್ರಭಾವವು ಸಾಕಷ್ಟಿದೆ ಎಂದು ತಿಳಿಸಿದ್ದಾರೆ.
ಕಟ್ಟೀಮನಿ ಅವರು ಹುಟ್ಟಿದ ಗ್ರಾಮದ ಮನೆಯಲ್ಲಿ ಈಗ ಅವರ ಮಗಳು ನೀಲವ್ವ ವಾಸಿಸುತ್ತಿದ್ದಾರೆ. ನೀಲಮ್ಮ ಮತ್ತು ಇವರ ಮೊಮ್ಮಗ ಬಾಲಕ ವಿಠ್ಠಲ ಮಾಳಿಗಿ ಅವರನ್ನು ಗಣ್ಯರು ಭೇಟಿಮಾಡಿದರು.
****