ಅನುದಿನ ಕವನ-೨೯೪, ಕವಿ: ಹಿಪ್ಪರಗಿ ಸಿದ್ಧರಾಮ, ಧಾರವಾಡ, ಕವನದ ಶೀರ್ಷಿಕೆ: ಕಲೆಗಾರ

 

ಕಲೆಗಾರ

ಸೃಷ್ಟಿಯೆಂಬುದು ಕಲೆಯ ನೆಲೆ
ನೆಲದ ನೆಲೆಯಲರಳಿಹುದು ಕಲೆ
ಕಲೆಯ ಮನೋಭೂಮಿಕೆಯ ತಲ
ತಲೆಯ ಮಿದುಳಿನಲಿ ಮಿಂಚುತಲೆ
ಕರದ ಮೂಲಕ ಅರಳುತಲೆ

ಅರಳಿನಿಂತುದಕೆ ವಿಸ್ಮಯದಲೆ
ಅಲೆ-ಅಲೆಯಾಗಿ ಹೊಮ್ಮುತಲೆ
ಜಗಕೆ ಸೌಂದರ್ಯದ ಸಿರಿಕಲೆ
ಸಿರಿಯಿಂದ ನಾಡು ಮಿರುಗುತಲೆ
ಮೆರುಗಿನಿಂದ ವಿಜೃಂಭಿಸಿತು ಕಲೆ

ವೈಭವದ ಇತಿಹಾಸ ಸಾಕ್ಷಿಯಾಗುತಲೆ
ಕುತೂಹಲಿಗರ ಜಿಜ್ಞಾಶೆ ಹುಟ್ಟಿಸುತಲೆ
ಕಲೆ ವಿಜೃಂಭಿಸಿದರೂ ಕಲೆಗಾರನಿಗಿಲ್ಲ ನೆಲೆ
ಯಾಕಂದರೆ ನಿರಂತರ ಹುಡುಕಾಡುತಲೆ

ನಾಡಿನ ನಾಡಾಡಿಯಂತಲೆಯುತಲೆ
ಮೂಡುವುದು ಕ್ಷಣ-ಕ್ಷಣಕೂ ಭಾವದಲೆ
ತಿರುಗಾಡವೇ ಸ್ಪೂರ್ತಿಯ ಸೆಲೆ
ಕಲೆಗಾರನಿಗಿಂತ ಅಜರಾಮರ ಈ ಕಲೆ
ಕಾಡೇನು-ನಾಡೇನು ಹಂಗಿಲ್ಲದ ಕಲೆ

ಪ್ರಕಟಗೊಳ್ಳಲು ಅಲೆಯಾಗಿ-ಅಲೆ
ಸೃಷ್ಟಿ-ಸೃಷ್ಟಿಯಿಂದ ಸೃಷ್ಟಿಯಾದ ಕಲೆ
ಕಲೆಯನ್ನವಲಂಭಿಸಿದ ಚಿತ್ತಾರಕಲೆ
ಸಮ್ಮಳಿತಗೊಂಡು ಸಾಕಾರಗೊಳ್ಳುತಲೆ
ಪ್ರಕಟಗೊಳ್ಳುವವು ನೋಡಿಸಿಕೊಳ್ಳುತಲೆ

ಗೋಡೆ ಮೇಲಿನ ಹಸಿರು ತಲೆ
ಹಿಡಿದುಕೊಂಡಿರುವ ಮುಖದಲಿ ಭಾವದಲೆ
ತೇಲುಗಣ್ಣಿನ ಮುಖದಲೆ
ತುಂಟತನವ ಹೊಮ್ಮಿಸುತಲೆ
ಕಾಣುವ ಕನಸಿನ ಕಲೆಗಾರನ ಕಲೆ
ಮಂಗಳವನು ಹೇಳುವೆ ಮುಗಿಸುತಲೆ

-ಹಿಪ್ಪರಗಿ ಸಿದ್ಧರಾಮ, ಧಾರವಾಡ

*****