ಬಳ್ಳಾರಿ, ಅ. 24: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ/ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಅ. 25 ರಂದು ಸೋಮವಾರ ನಗರದಲ್ಲಿ ರ್ಯಾಲಿ ಹಮ್ಮಿಕೊಂಡಿದ್ದಾರೆ.
ಈ ಕುರಿತಂತೆ ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ ಅವರು, ಸೇವಾ ಅವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಪದವೀಧರ ಶಿಕ್ಷಕರ ಸಮಸ್ಯೆ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಹಾಗೂ ದೈಹಿಕ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಸಂಘದ ರಾಜ್ಯ ಘಟಕ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದೆ.
ಆದರೆ ನಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಹಲವು ದಿನಗಳಿಂದ ಸರಕಾರದ ಗಮನ ಸೆಳೆಯಲು ಶಿಕ್ಷಕರು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಎರಡು ದಿನಗಳಿಂದ ಶಿಕ್ಷಕರು ರಾಜ್ಯದಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ನಗರದ ಕೋಟೆಯ ಸೇಂಟ್ ಜಾನ್ ಶಾಲೆಯ ಬಳಿಯಿಂದ ಡಿಡಿಪಿಐ ಅವರ ಕಚೇರಿಗೆ ರ್ಯಾಲಿ ಮೂಲಕ ತೆರಳಿ ರಾಜ್ಯ ಶಿಕ್ಷಣ ಸಚಿವರು, ಇಲಾಖೆಯ ಹಿರಿಯ
ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ನಿಂಗಪ್ಪ ವಿವರಿಸಿದರು.
ಶಾಂತಯುತ ಹೋರಾಟಕ್ಕೆ ಮಣಿಯದಿದ್ದರೆ ಶಾಲೆ, ತರಗತಿಗಳನ್ನು ಬಹಿಷ್ಕರಿಸುವಂತಹ ಅಂತಿಮ ಹೋರಾಟಕ್ಕೆ ಸಿದ್ಧಗೊಳ್ಳುವುದು ಅನಿವಾರ್ಯ ವಾಗಲಿದೆ. ಇದಕ್ಕೆ ಸರಕಾರ ಅವಕಾಶ ನೀಡಬಾರದು ಎಂದು ಅವಳಿ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮನವಿ ಮಾಡಿದರು.
*****