‘ಮಕ್ಕಳೊಂದಿಗಿದ್ದು, ನಿರಂತರ ಹೋರಾಟ’ ಶಿಕ್ಷಕರ ವಿಶೇಷ ಅಭಿಯಾನ: ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಪ್ರಾಥಮಿಕ ಶಿಕ್ಷಕರ ಸಂಘದಿಂದ ರ್ಯಾಲಿ(Rally)

ಬಳ್ಳಾರಿ, ಅ. 25: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ರ್ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ- ವಿಜಯನಗರ ಜಿಲ್ಲಾ ಘಟಕದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ನಗರದ ಕೋಟೆಯ ಸೇಂಟ್ ಜಾನ್ ಶಾಲೆಯ ಬಳಿಯಿಂದ ಬಳ್ಳಾರಿ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ ಮತ್ತು ವಿಜಯನಗರ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್ ಅವರ ನೇತೃತ್ವದಲ್ಲಿ ಡಿಡಿಪಿಐ ಕಚೇರಿಗೆ ರ್ಯಾಲಿ ಮೂಲಕ ತೆರಳಿದ ಶಿಕ್ಷಕರು ಹೊರಗಡೆ ಪ್ರತಿಭಟನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಿ. ನಿಂಗಪ್ಪ ಅವರು ಸೇವಾ ಅವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಪದವೀಧರ ಶಿಕ್ಷಕರ ಸಮಸ್ಯೆ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಹಾಗೂ ದೈಹಿಕ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಸಂಘದ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಹಲವು ದಿನಗಳಿಂದ ಸರಕಾರದ ಗಮನ ಸೆಳೆಯಲು ‘ಮಕ್ಕಳೊಂದಿಗಿದ್ದು, ನಿರಂತರ ಹೋರಾಟ’ ಹಮ್ಮಿಕೊಳ್ಳಲಾಗಿದೆ ಎಂದರು.
ಇಷ್ಟವಿಲ್ಲದಿದ್ದರೂ ಶಿಕ್ಷಕರು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಮೂರು ದಿನಗಳಿಂದ ಶಿಕ್ಷಕರು ರಾಜ್ಯದಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸಂಘದ ರಾಜ್ಯ ಘಟಕ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದೆ. ಆದರೂ ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ ಎಂದು ನಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ಬಸವರಾಜ ಸಂಗಪ್ಪನವರ್ ಅವರು ಮಾತನಾಡಿ,
ದೇಶಕ್ಕೆ ಸ್ವಾತಂತ್ರ್ಯ ಬರಲು ಶಿಕ್ಷಕರು ಶ್ರಮಿಸಿದ್ದಾರೆ. ಚಳುವಳಿಯಲ್ಲಿ ಪಾಲ್ಗೊಂಡು ಹೋರಾಟಗಾರರನ್ನು ಹುರಿದುಂಬಿಸಿದ್ದನ್ನು ಇತಿಹಾಸ ತಿಳಿಸುತ್ತದೆ. ಇದೀಗ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ಶಿಕ್ಷಕ ಸಮುದಾಯಕ್ಕೆ ಇಲಾಖೆಯ ಅಧಿಕಾರಿಗಳು ಬೆದರಿಕೆ ಹಾಕಿದರೆ ಜಗ್ಗುವುದಿಲ್ಲ ಎಂದರು.
ತಮ್ಮ ಶಾಂತಿಯುತ ಹೋರಾಟಕ್ಕೆ ಮಣಿಯದಿದ್ದರೆ ಶಾಲೆ, ತರಗತಿಗಳನ್ನು ಬಹಿಷ್ಕರಿಸುವಂತಹ ಅಂತಿಮ ಹೋರಾಟಕ್ಕೆ ಸಿದ್ಧಗೊಳ್ಳುವುದು ಅನಿವಾರ್ಯ ವಾಗಲಿದೆ. ಇದಕ್ಕೆ ಸರಕಾರ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ಡಿಡಿಪಿಐ ಸಿ. ರಾಮಪ್ಪ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರ್ಯಾಲಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ ಜಿ, ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿಬಿ, ಉಪಾಧ್ಯಕ್ಷ ಕುಬೇರ ಆಚಾರಿ, ಗೀತಾ ವಿ ಕೋಶಾಧ್ಯಕ್ಷ ಹೀರ್ಯಾ ನಾಯ್ಕ್ ಎಲ್ ಎಸ್ , ಸಹ ಕಾರ್ಯದರ್ಶಿಗಳಾದಗಣೇಶ್ ಪಿ ಸಿದ್ದಮ್ಮ, ಎ ಎಸ್ ಗೀತಾ ಜೆ, ಸಂಘಟನಾ ಕಾರ್ಯದರ್ಶಿಗಳಾದ ನಾಗೇಶ್ ಪಿ ವಿಜಯಕುಮಾರಿ ಎಲ್, ಜಿಲ್ಲಾ ಕಾರ್ಯದರ್ಶಿ ಕಡ್ಲಿ ವೀರಭದ್ರಪ್ಪ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ರಾಜ್ಯ ಅಧ್ಯಕ್ಷ ಹನುಮಂತಪ್ಪ, ಕುರುಗೋಡು ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ, ಶಿಕ್ಷಕರ ಸಂಘದ ವಿವಿಧ ತಾಲೂಕು ಅಧ್ಯಕ್ಷರಾದ ಪದ್ಮರಾಜ್ ಜೈನ್, ಗೌಡರ ಕೊಟ್ರೇಶ್, ಜಗದೀಶ್ ವಿಬಿ, ತುಕಾರಾಮ್ ಗೊರವ, ಸುನಿಲ್ ಕುಮಾರ್, ಶ್ರೀಧರ್, ಲೋಕಪ್ಪ ಹ್ಯಾಟಿ, ಮಾರ್ಗದಪ್ಪ ಬಿ, ಅಣಜಿ ಸಿದ್ಲಿಂಗಪ್ಪ, ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಮರಳಿನ ಗೌಡ, ಡಿ ಎಸ್ ಮಲ್ಲಯ್ಯ, ಕೊಟ್ರಪ್ಪ ಬಿ, ತಮ್ಮಣ್ಣ, ಶೇಖರಯ್ಯ ಟಿ ಎಚ್ ಎಂ, ಬಂಡಿ ಬಸವರಾಜ್, ಶಿವಶಂಕರ್ ಹಾಗೂ ವಿವಿಧ ತಾಲೂಕುಗಳಿಂದ ನೂರಾರು ಶಿಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು
*****