ಅನುದಿನ‌ಕವನ-೨೯೭, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಶೋಭ ಅವರ 5 ಹನಿಗವಿತೆಗಳು

ಶೋಭ ಅವರ 5 ಹನಿಗವಿತೆಗಳು


ಅನಾಥರು

ಹೆತ್ತವರಿಲ್ಲದೆ
ಮಕ್ಕಳು
ಆದರು ಅನಾಥರು ;
ಹೆತ್ತವರಿದ್ದೂ
ಅವರನ್ನು
ತಿರುಗಿ ನೋಡದ
ಮಕ್ಕಳು
ನಿಜಕ್ಕೂ ಅನಾಥರು.


ಕೆಟ್ಟ ಮುಖ

ಕೆಟ್ಟ ಮುಖಕ್ಕಿಂತ
ಕೆಟ್ಟ ಮನಸ್ಥಿತಿ
ಎಂದಿಗೂ ಅಪಾಯ ;
ಕೊಚ್ಚೆ ನೀರು ಎಂದಾದರೂ ಶುದ್ದವೇ ?
ತಿಳಿದು ದೂರವಿರುವುದೇ
ಉಪಾಯ


ದೇವರು

ಮೈತುಂಬ
ಬಟ್ಟೆತೊಟ್ಟರೂ
ಮನಸ್ಸಿನಿಂದ
ಬೆತ್ತಲೆ ಕೆಲವರು ;
ಬೆಟ್ಟವೇರಿ ನಿಂತು
ಬಟ್ಟೆ ಇರದಿದ್ದರೂ
ಬಾಹುಬಲಿ
ದೇವರು.

‌‌‌ ೪
ಗ್ರಹಣ

ಸಂಸಾರದಲ್ಲಿ
ಸಹಧರ್ಮಿಣಿ
ಅರಿತು ನಡೆಯಲು
ಬದುಕು ಸುಂದರ
ಚಿತ್ರಣ ;
ಅರಿವು, ಅರ್ಥವಿರದವಳ
ಜೊತೆ ಎಂದಿಗೂ
ಹಿಡಿದಂತೆ
ಗ್ರಹಣ .


ಉಸಿರು

ಹುಟ್ಟಿದಾಗ
ಮೊದಲುಸಿರು
ಸತ್ತಾಗ
ಕೊನೆಯುಸಿರು
ಇವೆರಡರ ಮಧ್ಯದಲ್ಲಿ
ಮನುಜನ ಜೀವನ
ಬರೀ
ಏದುಸಿರು – ಏದುಸಿರು

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****