ತಿಳಿದು ಬಾಳು ತುಳಿದು ಬೇಡ
೧
ಹಳಿದು ಬೆಳೆಯಬೇಕು ಎಂಬ
ಹುಂಬತನವು ಏತಕೆ?
ತುಳಿದು ಬಾಳಬೇಕು ಎಂಬ
ದುಷ್ಟತನವು ಏತಕೆ?
೨
ಹಳಿದು ಬೆಳೆಯುವುದಕ್ಕಿಂತ
ಬೆಳೆಸಿ ಬೆಳೆಯ ಬೇಕಿದೆ
ತುಳಿದು ಬಾಳುವುದಕ್ಕಿಂತ
ತಿಳಿದು ಬಾಳ ಬೇಕಿದೆ
೩
ಹೋಲಿಸಿಕೊಳುತ ಬದುಕುವುದು
ಹೊಲಸಿಗಿಂತ ಕೀಳಿದೆ
ಹೊಗಳಿ ಬಾಳುತಲಿರುವುದು
ಅದಕ್ಕಿಂತ ಕೀಳಿದೆ
೪
ಬೊಗಳು ಶುನಕವೆಂದು ಕಚ್ಚ
ದೆಂದು ಜನರು ಕರೆವರು
ಉಗುಳಿ ಜಾಸ್ತಿ ಇರಲು ರೋಗ
ತಗಲಿ ನಾಶವಾಗ್ವರು
೫
ಹುಳುಕು ಮನಸು ಕೊಳಕ ಬಿತ್ತಿ
ಸೆಳೆಯ ಬಯಸಿ ಸತ್ಯವ
ತಳುಕು ಮಾತು ಕುತ್ತು ತಂದು
ಹಳಿದು ಹಾಕಿ ನಿತ್ಯವು
೬
ಗಂಜಿಗಾಗಿ ಅಂಜಿ ನಡೆದು
ಪಂಜಿನಂತೆ ಬದುಕು
ಮಂಜಿನಂತೆ ಕರಗೊ ಜೀವ
ಇದ್ದಲ್ ದೇವರ ಹುಡುಕು
೭
ಬದುಕು ನಂದು ಬವಣೆ ನಂದು
ಇಂದು ಅಂದು ಮುಂದು
ಕೆದಕಬೇಡ ನನ್ನ ಹುಳುಕು
ತಂದು ಏನೊ ಒಂದು
೮
ಕೈಯ ಹಿಡಿವ ದೇವನಿಹನು
ಎನ್ನ ಕಾಯ್ವನೆಂದೂ
ಮೈಯಿ ಮನವ ನೀಡಿ ಅವಗೆ
ನಿಷ್ಠೆ ಇಡುವೆನೆಂದೂ
೯
ಖೂಳ ಜನರ ಕ್ಷಮಿಸಿ ಬಿಡು
ಬಾಳು ಹಸನವಾಗಲಿ
ತಾಳಿ ಬಾಳಿ ಸೋಲ ಕಳೆದು
ತೇಲಿ ಹರುಷ ತುಂಬಲಿ
-ಮಾಲತೇಶ ನಾ ಚಳಗೇರಿ
ಜಿ ಎಚ್ ಎಸ್, ಹಿರೇಹಳ್ಳಿ ಬ್ಯಾಡಗಿ
ಹಾವೇರಿ (ಜಿ)