ಅನುದಿನ ಕವನ-೩೦೧, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಅಕ್ಷರ ಪ್ರಣತೆ (ಪುನೀತ ರಾಜಕುಮಾರ್ ಅವರಿಗೆ ಅಕ್ಷರ ನಮನ)

ತಮ್ಮ ಪ್ರಬುದ್ಧ ಅಭಿನಯದಿಂದ ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ವಿಧಿವಶವಾಗಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡನಾಡು ಶೋಕತಪ್ತವಾಗಿದೆ. ರಾಷ್ಟ್ರಾದಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕವಿಗಳು, ಲೇಖಕರು ತಮ್ಮ ಬರಹಗಳ ಮೂಲಕ ಅಕ್ಷರ ನಮನ ಸಲ್ಲಿಸುತ್ತಿದ್ದಾರೆ.
ಕವಿ ಎ. ಎನ್ ರಮೇಶ್ ಗುಬ್ಬಿ ಅವರ ಅರ್ಥಪೂರ್ಣ ‘ಅಕ್ಷರ ಪ್ರಣತೆ’ ಕವಿತೆ ಮೂಲಕ ಕರ್ನಾಟಕ‌ಕಹಳೆ ಡಾಟ್ ಕಾಮ್ ಕಂಬನಿ‌ ಮಿಡಿಯುತ್ತಿದೆ…..ಪ್ರಬುದ್ಧ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ.
(ಸಂಪಾದಕರು)

ಅಕ್ಷರಪ್ರಣತೆ -1

ವಿನಮ್ರತೆ ಸಹೃದಯತೆ ಪ್ರತಿರೂಪ ಪುನೀತ
ಅಬಾಲವೃದ್ಧರಾಗಿ ಸಕಲರಿಗೂ ವಿನೀತ
ಕರುನಾಡಿನ ಕೀರ್ತಿ ಪಸರಿಸಿದ ಧೀಮಂತ
ಮಣ್ಣಾದರೂ ಪ್ರತಿಮನದಲ್ಲೂ ಸದಾ ಜೀವಂತ.!

ಅಕ್ಷರಪ್ರಣತೆ -2

ವೃತ್ತಿ ಬಂಧವಿಲ್ಲ, ರಕ್ತ ಸಂಬಂಧವಿಲ್ಲ
ಹುಟ್ಟೂರಿನ ನಂಟಿಲ್ಲ, ಗೆಳೆತನದ ಅಂಟಿಲ್ಲ
ಆದರೂ ಮನಸೇಕೋ ವಿಕ್ಷಿಪ್ತ ವಿಹ್ವಲ
ವ್ಯಕ್ತಿಸಲಾಗದ ನೋವು ಸಂಕಟ ತುಮುಲ
ಇದೇ ಪುನೀತ ಪ್ರಭೆಯ ಚೈತನ್ಯ ಜಾಲ.!

ಅಕ್ಷರಪ್ರಣತೆ -3

ಇದೆಂತಹಾ ಸಾವು? ಮನಸು ಜರ್ಝರಿತ
ವಿಧಿ ವಿಧಾತರ ಮೇಲೆ ನಂಬಿಕೆಗಳೇ ಕುಸಿತ
ಬದುಕಿನ ಭರವಸೆಗಳಿಗೇ ಮರ್ಮಾಘಾತ
ಹೃನ್ಮನಗಳೆಲ್ಲಾ ದಿಗ್ಭ್ರಾಂತ ಶೂನ್ಯದಿಂದಾವೃತ.!

ಅಕ್ಷರಪ್ರಣತೆ -4

ಲಕ್ಷಾಂತರ ಮನ-ಮನೆಗಳನು ಬೆಳಗುತಿದ್ದ
ನಂದಾದೀಪವೇ ನಂದಿ ಹೋದರೆ ಬೆಳಕಿನ್ನೆಲ್ಲಿ?
ಸಹಸ್ರಾರು ಸಾಧಕರಿಗೆ ನಿತ್ಯ ಸ್ಫೂರ್ತಿಯಾಗಿದ್ದ
ರೂಪವೇ ಅಸ್ತಂಗತವಾದರೆ ಬದುಕಿನ್ನೆಲ್ಲಿ..??

ಅಕ್ಷರಪ್ರಣತೆ -5

ಜೀವ-ಜೀವನಗಳ ವಿಶ್ವಾಸಗಳೇ ಛಿದ್ರ-ಛಿದ್ರ
ಬೆಚ್ಚಿದ ಆಂತರ್ಯಗಳು ತಲ್ಲಣಿಸಿ ಆರ್ದ್ರ
ಅಯ್ಯೋ ಅದೆಷ್ಟು ಕ್ರೂರಿಯಾಯ್ತು ಸಾವು
ಬರಡಾಯ್ತು ಕನಸು-ಭರವಸೆಗಳ ಠಾವು.!
ಬತ್ತಿತು ಕೋಟಿಹೃದಯಗಳ ಭಾವಜಲವು.!

-ಎ.ಎನ್.ರಮೇಶ್. ಗುಬ್ಬಿ.
*****