ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜಕುಮಾರ್ ಅಂತ್ಯ ಕ್ರಿಯೆ: ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿ ಎಸ್ ವೈ ಭಾಗಿ

ಬೆಂಗಳೂರು, ಅ.31: ಶುಕ್ರವಾರ ವಿಧಿವಶರಾದ ಜನಪ್ರಿಯ ಚಿತ್ರನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಭಾನುವಾರ ಬೆಳಿಗ್ಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಬೊಮ್ಮಾಯಿ ಅವರು ಸರ್ಕಾರಿ ಗೌರವದ ಬಳಿಕ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.


ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಸಿಎಂ‌ ಬಿ ಎಸ್ ವೈ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು, ಚಲನ ಚಿತ್ರ ನಟರಾದ ವಿ.ರವಿಚಂದ್ರನ್, ಯಶ್,ಸುದೀಪ್,ಉಪೇಂದ್ರ, ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯ ಅಧಿಕಾರಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಅಗಲಿದ ನಟನಿಗೆ ಗೌರವ ಸಲ್ಲಿಸಿದರು.


ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಅಂತಿಮ ಸಂಸ್ಕಾರದ ಪೂಜಾವಿಧಿಗಳನ್ನು ನೆರವೇರಿಸಿದರು. ಡಾ. ಶಿವ ರಾಜಕುಮಾರ ಸೇರಿದಂತೆ ಡಾ. ರಾಜ್ ಕುಟುಂಬದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
*****