ಸುಪಾರಿ, ಬ್ಲಾಕ್ ಮೇಲ್ ಜರ್ನಲಿಸ್ಟ್ ಗಳ ಬಗ್ಗೆ ಎಚ್ಚರವಿರಲಿ: ಪತ್ರಿಕೆಗಳಿಗೆ ಓದುಗರ ವಿಶ್ವಾಸರ್ಹತೆ ಮುಖ್ಯ -ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್

ಬಳ್ಳಾರಿ, ನ.1: ಪತ್ರಿಕೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರೆ ಓದುಗರ ವಿಶ್ವಾರ್ಸಹತೆ ಗಳಿಸಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಅವರು ಹೇಳಿದರು.
ಸೋಮವಾರ ನಗರದ ಬಿಡಿಎಎ ಸಭಾಂಗಣದಲ್ಲಿ ನೂತನ ಕಲ್ಯಾಣ ವಿಜಯ ದಿನಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಪತ್ರಿಕಾರಂಗ(ಮಾಧ್ಯಮ)ದ ಪಾತ್ರ ಮಹತ್ವದ್ದಾಗಿದೆ. ಏಳೂವರೆ ದಶಕಗಳ ಕಾಲ ಜನತಂತ್ರ ವ್ಯವಸ್ಥೆ ಬಲಿಷ್ಟಗೊಂಡಿರುವುದೇ ಉತ್ತಮ‌ ಪತ್ರಿಕೆಗಳು, ಪತ್ರಕರ್ತರಿಂದ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
ಎಲ್ಲಾ ರಂಗಗಳಂತೆ ರಾಜಕೀಯ, ಸಂಸ್ಕೃತಿ, ಪತ್ರಿಕೆಗಳು
ವಾಣಿಜ್ಯಕರಣಗೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ . ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಗಳು ಜನರ ನಿಜದನಿಯಾಗಿ ಕಾರ್ಯನಿರ್ವಹಿಸಬೇಕು. ಆದರೆ ಪ್ರಸ್ತುತ ಮಾಧ್ಯಮಗಳು ಕಮರ್ಷಿಯಲ್ ಆಗಿದೆ ವಿಷಾಧಿಸಿದರು.
ಸುಪಾರಿ ಜರ್ನಲಿಸ್ಟ್ ಗಳ ಬಗ್ಗೆ ಎಚ್ಚರವಿರಲಿ: ಜನರ ದನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾಧ್ಯಮಗಳು ಜನರ‌ ವಿಶ್ವಾಸಾರ್ಹತೆ ಗಳಿಸಬೇಕು. ದುರಾದೃಷ್ಟಕರ ವಿಷಯವೆಂದರೆ ಸುಪಾರಿ ಜರ್ನಲಿಸ್ಟ್ ಗಳು ಪತ್ರಿಕಾರಂಗಕ್ಕೆ ಪ್ರವೇಶಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲೂ ಇಂತಹ ಬ್ಲಾಕ್ ಮೇಲ್ ಮಾಡುವ ಪತ್ರಕರ್ತರು ಇದ್ದಾರೆ. ನಗರದ ಒಬ್ಬ ಪತ್ರಕರ್ತನ ವಿರುದ್ಧ ಬ್ಲಾಕ್ ಮೇಲ್ ಗೆ ಸಂಬಂಧಿಸಿದಂತೆ ೨೨ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ ಅವರು
ಇಂತಹವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದರು.
.ಪತ್ರಕರ್ತರು ಭ್ರಷ್ಟಾಚಾರ ವಿರುದ್ಧ ಸೆಟೆದು ನಿಲ್ಲಬೇಕು. ಕೇವಲ ಪತ್ರಿಕೆ ಆರಂಭಿಸುವುದು ಮುಖ್ಯವಲ್ಲ. ಅದನ್ನು ಎಲ್ಲರೂ ಮೆಚ್ಚುವಂತೆ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕೆಂದು ಹೇಳಿದರು.
ಪತ್ರಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ,
ಕಲ್ಯಾಣ ವಿಜಯ ಪತ್ರಿಕೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿರಲಿ ಎಂದು ಹೇಳಿದರು.
ಉಭಯ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿ. ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ದೊರೆತರೆ ಪರಿಹಾರ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಪತ್ರಕರ್ತರು ಸುದ್ದಿ, ಮಾಹಿತಿ ನೀಡಬೇಕೇ ಹೊರತು ತಮ್ಮ ಅಭಿಪ್ರಾಯವನ್ನು ನೀಡಬಾರದು ಎಂದು ತಿಳಿಸಿದರು.
ಜಿಲ್ಲಾ ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ, ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಲೈವ್ ಆಗಿ ಪ್ರಕಟಗೊಳ್ಳುತ್ತಿರುವುದು ಪತ್ರಿಕೆಗಳಿಗೆ ಸವಾಲಾಗಿ ಪರಿಣಮಿಸಿವೆ. ಕಲ್ಯಾಣ ವಿಜಯ ತಂಡ ವಸ್ತುನಿಷ್ಠ ಸುದ್ದಿಗಳನ್ನು ಮಾತ್ರ ಪ್ರಕಟಿಸಲಿ ಎಂದು ಆಶಿಸಿ ಶುಭ ಕೋರಿದರು.
ನೂತನ ಪತ್ರಿಕೆಯ ಇಮಾಮ್ ಗೋಡೆಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೈ-ಕ ಇದೀಗ ಕಲ್ಯಾಣ ಕರ್ನಾಟಕವಾಗಿ ರೂಪುಗೊಂಡಿದೆ. ಈ ಭಾಗದಲ್ಲಿ ಸಾಕಷ್ಟು ಅನುದಾನ ಬಂದಿದ್ದರೂ ನಿರೀಕ್ಷೆಯಂತೆ ಅಭಿವೃದ್ಧಿ ಆಗಿಲ್ಲ. ಇಲ್ಲಿನ ಜನರು ಬೇರೆ ಜಿಲ್ಲೆಗಳಿಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಪತ್ರಿಕೆ ಆ ಕೆಲಸ ಮಾಡಲಿದೆ. ಉಭಯ ಜಿಲ್ಲೆಗಳನ್ನು ಕೇಂದ್ರೀಕರಿಸಿ ಎರಡೂ ಜಿಲ್ಲೆಗಳಲ್ಲಿ ಪತ್ರಿಕೆ ಪ್ರಕಟವಾಗಲಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕೆಯನ್ನು ಬೆಳೆಸುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ೩೦ ವರ್ಷದ ಹಿಂದೆ ನಾನೂ ವರದಿಗಾರನಾಗಿದ್ದೆ. ಇದು ಬಹಳ ಕಷ್ಟದ ಕೆಲಸ. ರವಿ ಬೆಳಗೆರೆ ಅವರೊಂದಿಗೆ ೬ ತಿಂಗಳು ಕಾರ್ಯ‌ನಿರ್ವಹಿಸಿದ್ದು, ಬೆಂಗಳೂರಿನಲ್ಲಿ ಪುಡಿ ರೌಡಿಯೊಬ್ಬನ ಬಗ್ಗೆ ಬರೆದಾಗ ತಮ್ಮ ಮೇಲೆ ಹಲ್ಲೆ ನಡೆದು ಈಗಲೂ ಹಣೆಯ ಮೇಲೆ ಕಲೆ ಇದೆ ಎಂದು ಸ್ಮರಿಸಿದರು.
ಚಿತ್ರನಟ ಪುನೀತ್ ರಾಜಕುಮಾರ್ ಅವರ ಸರಳ, ಸಜ್ಜನಿಕೆ ಸ್ಮರಿಸಿ ಗದ್ಗಿತರಾದರು.
ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಚಾಟಿ ಏಟು ನೀಡುವ ಪತ್ರಿಕೆಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಆನೆಗೆ ಅಂಕುಶವಿದ್ದಂತೆ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗಕ್ಕೆ ಪತ್ರಕರ್ತರು. ಉಭಯ ಜಿಲ್ಲೆಗಳ ಅಭಿವೃದ್ಧಿಗೆ ನೂತನ ಪತ್ರಿಕೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ ಮತ್ತು ಅಧ್ಯಕ್ಷತೆ ವಹಿಸಿದ್ದ ಸಂಪಾದಕ ಪೂಜಾರ ವೆಂಕೋಬ ನಾಯಕ ಮಾತನಾಡಿದರು.
ಜಿಪಂ ಸದಸ್ಯ ಅಲ್ಲಂ ಪ್ರಶಾಂತ್, ಜೆಡಿಎಸ್ ಮುಖಂಡರಾದ ಮೀನಳ್ಳಿ ತಾಯಣ್ಣ, ರೈತ ಸಂಘದ ಪುರುಷೋತ್ತಮಗೌಡ, ಕಾಂಗ್ರೆಸ್ ಯುವ ಮುಖಂಡ ನಾರಾ ಭರತ್ ರೆಡ್ಡಿ, ಸಿಪಿಎಂ ಮುಖಂಡ ವಿಎಸ್ ಶಿವಶಂಕರ್ ಇದ್ದರು.
ಇಂಜನಿಯರ್ ಎಂ. ವಿನೋದ್ ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ನಾಗರಾಜಸ್ವಾಮಿ ವಂದಿಸಿದರು.
*****