ಅನುದಿನ‌ ಕವನ-೩೦೭, ಕವಿ: ಮಧುರ ಚೆನ್ನ (ಎಸ್.ಮಂಜುನಾಥ್) ಬೆಂಗಳೂರು, ಕವನದ ಶೀರ್ಷಿಕೆ:ಎಡರು ತೊಡರು ಮತ್ತು ನಿಷ್ಠರ

ಎಡರು ತೊಡರು ಮತ್ತು ನಿಷ್ಠರ

ತುಂಗ ಉತ್ತುಂಗಕ್ಕೆ ಬೀಸು ಕೊಡಲಿ ತಾಕಿ
ಕೆಂಪು ರಕ್ತಕಣಗಳಲ್ಲಿ ಇತ್ತೀಚೆಗೆ
ಬಿಳಿ ಮಾರ್ಕುಗಳು ಅಚ್ಚಾದುದು,
ಢಣ ಢಣ ಸುತ್ತಿಗೆ ಒಳೇಟುಗಳು ಬಿದ್ದು
ಹೊತ್ತು ಹೊತ್ತಿಗೂ ಸದ್ದು ಹೆಚ್ಚಾದುದು…

ತನ್ನ ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದ
ನಾಟಿ ಕೋಳಿ ಬೀದಿಗೆ ಬಂದು ಕೂಗುತ್ತಿದೆ
ಬೆದರಿದುದೋ… ಬೆಂಬಲಿಸಿದ್ದೋ ಗೊತ್ತಿಲ್ಲ,
ಮೊಟ್ಟೆ ಮರಿಗಳಿಗೆ ರಟ್ಟೆ ಮೂಡುತ್ತಿಲ್ಲ
ಚಿಟ್ಟೆ ಗೂಡುಗಳಲ್ಲಿ ಕಂಬಳಿ ಹುಳುಗಳಿಗೆ ತಾವಿಲ್ಲ!

ಹಕ್ಕಿಗಳನ್ನು ಹಾರಬಿಟ್ಟರೆ
ಪಂಜರವು ಅನಾಥವೇ…
ಝೇಂಕರಿಸುವ ತಂತಿಯನ್ನು ಹರಿದುಬಿಟ್ಟರೆ
ಬಿಲ್ಲಿಗೆ ಬರಡುತನವೇ…
ಮಾಯದ ಬಾಣಗಳು ತೂರಿ ಬರುತ್ತಿವೆ
ಸಿಂಗಾರದ ಪಂಜರಗಳಾಗಿ
ಕಾಮ್ರೇಡುಗಳ ಬಲವಾಗಿ ಸೆಳೆಯುತ್ತಿವೆ
ದಡಕ ದಡಕ ಕುಲುಕದಿರಿ
ಎಡಕ್ಕೆ ನಡೆಯಿರಿ ಎಡಕ್ಕೆ!

ನಮ್ಮ ಬಾವುಟಕ್ಕೆ ನಿಮ್ಮ
ರಕ್ತದ ಕಲೆಗಳು ಅಂಟಿದ್ದು
ನಿಮ್ಮ ಹೋರಾಟದೊಳು
ನಮ್ಮ ಬಳಲಿಕೆಯ ದನಿ ನುಸುಳಿದ್ದು
ದೇಸಿ ತಳಿಗಳಿಗೆ ನುಸಿಪೀಡೆ ಹತ್ತಿದಂತೆ
ಕಾಡು ಮೇಡುಗಳಲ್ಲಿ ಅಲೆವ ಸಂಗಾತಿಗಳೆ
ಮುಗ್ಗಲು ಕಾಳುಗಳ ತಿಂದು
ಎಗ್ಗಲು ಬಾರದೆ ಕುಸಿವ ನಿಮ್ಮ
ಬಿರುಕು ಪಾದಗಳಿಗೆ ನಮ್ಮ
ಲಾಲ್ ಸಲಾಂ, ಲಾಲ್ ಸಲಾಂ

ಕಾಲಿಲ್ಲದ ಹಾವು ರಭಸಿದ ಓಡುತ್ತಿದೆ
ನೂರು ಕಾಲಿದ್ದರೂ ಶತಪದಿ ತೆವಳುತ್ತಿದೆ,
ಕ್ಷಾಮವೊಂದು ಕಡೆ, ಪ್ರಳಯವೊಂದು ಕಡೆ
ಗಾವುದ ಗಾವುದ ದೂರವ
ಆಲೋಚಿಸಿ ಧ್ಯಾನಿಸಿದ್ದ
ಕಣ್ಣುಗಳು ಮಂಜಾಗಿವೆ,
ಚಾಳೀಸು ತೊಡಿಸೋಣವೆಂದರೆ
ಕಿವಿಗಳೇ ಇಲ್ಲವಲ್ಲ;

ಇದೆಂಥ ಬೆರಗು
ಇದೆಂಥ ದೊರಗು
ನೀರು ಸುಟ್ಟ ಜ್ವಾಲೆಗಳು
ಭಗ್ಗನೆ ಉರಿದ ಹಸಿ ಹಲ್ಲುಗಳು
ಮಗ್ಗವ ನುಂಗಿದ ಲಾಳಿಗಳು;

ಕೊಡಲಿ ಸುತ್ತಿಗೆಗಳ
ಸಾಣೆ ಹಿಡಿವ ಯಂತ್ರಗಳಿಗೆ
ಕಿಲುಬು ಹತ್ತಿದೆ
ಅಲ್ಲೊಂದು ಜೀವ ಕುಲ;
ಕಿಲುಬು ಕಿಲುಬೆಂದು
ಹಲುಬುವವರದ್ದು
ಅದ್ಯಾವ ಕುಲ…
ಒಂದರಲ್ಲಿನ್ನೊಂದು ಸೇರಿ
ಒಂದೇ ಆಗುವ ಕೆಂಪುಕುಲ

ದೂರ ತೀರ ಯಾನದಲ್ಲಿ
ಬಹುಬೇಗ ದಡ ಸೇರಲು
ಬಲ ತಿರುವಿನ ದಾರಿ ಕರೆಯುತ್ತಿದೆ;
ಬಾಗದಿರಿ, ಬಳುಕದಿರಿ
ಬಾಗದಿರಿ, ಬಳುಕದಿರಿ
ಎಡಕ್ಕೆ ಸಾಗಿರಿ, ಎಡಕ್ಕೆ!

-ಮಧುರ ಚೆನ್ನ (ಎಸ್.ಮಂಜುನಾಥ),
ಬೆಂಗಳೂರು
*****