ಅನುದಿನ ಕವನ-೩೦೮, ಕವಿ: ಮಹಮ್ಮದ್ ರಫೀಕ್ ಕೊಟ್ಟೂರು, ಅಗಳಕೇರಾ ಕವನದ ಶೀರ್ಷಿಕೆ: ಬೆಳಕೂ ಈಗ‌ ಮೊದಲಿನಂತಿಲ್ಲ…..

ಕವಿ ಪರಿಚಯ:
ವೃತ್ತಿಯಲ್ಲಿ ಶಿಕ್ಷಕರಾಗಿರುವ ಮಹಮ್ಮದ್ ರಫೀಕ್ ಅವರು ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದವರು.
ಪ್ರಸ್ತುತ ಕೊಪ್ಪಳ‌ ಜಿಲ್ಲೆಯ ಅಗಳಕೇರಾ ಸರಕಾರಿ ಪ್ರೌಢಶಾಲೆಯಲ್ಲಿ
ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಬಾಂಬೆ ಮೊಗವೀರ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ವಿಕ್ರಮ ಪಾಕ್ಷಿಕದ ವಿಜಯದಶಮಿ ಕವನ ಸ್ಪರ್ಧೆಯಲ್ಲಿ ರಫೀಕ್ ಅವರ ಕವನ ಮೆಚ್ಚುಗೆ ಪದೆದಿದೆ.
ಇವರ ಹಲವು ಕವಿತೆಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇಂದಿನ‌ ‘ಅನುದಿನ ಕವನ’ ದ ಗೌರವಕ್ಕೆ ಮಹಮ್ಮದ್ ರಫೀಕ್ ಅವರ ‘ಬೆಳಕೂ ಈಗ ಮೊದಲಿನಂತಿಲ್ಲ’ ಕವಿತೆ ಪಾತ್ರವಾಗಿದೆ.👇

ಬೆಳಕೂ ಈಗ‌ ಮೊದಲಿನಂತಿಲ್ಲ…..

ಬೆಳಕೂ ಈಗ‌ ಮೊದಲಿನಂತಿಲ್ಲ
ಕಾಲಕ್ಕೆ ತಕ್ಕಂತೆ ಬದಲಾಗಿದೆ

ಕೆಲವರ ಮನೆ ಅಂಗಳದಲ್ಲಿ
ಪಟಾಕಿಯಾಗಿ,ಆಕಾಶ ಬುಟ್ಟಿ ಯಾಗಿ
ಬಾಣ ಬಿರುಸುಗಳಾಗಿ
ಅಂಗಳ, ಮನೆಗಳ
ಬೆಳಗುತ್ತಿದೆ

ಬೆಳಕೂ ಈಗ‌ ಮೊದಲಿನಂತಿಲ್ಲ
ಕಾಲಕ್ಕೆ ತಕ್ಕಂತೆ ಬದಲಾಗಿದೆ

ಹಲವರ ಮನೆಗಳದಲ್ಲಿ
ಬೆಳಕು  ಕಂದೀಲಾಗಿ
ಮನೆಯೊಳಗೆ
ಒಬ್ಬರ ಮುಖವ ಮತ್ತೊಬ್ಬ ನೋಡದಂತ
ಹಸಿವ ರೋದನ ಕಾಣದಂತೆ
ಕ್ಷೀಣವಾಗಿದೆ

ಬೆಳಕೂ ಈಗ‌ ಮೊದಲಿನಂತಿಲ್ಲ
ಕಾಲಕ್ಕೆ ತಕ್ಕಂತೆ ಬದಲಾಗಿದೆ

ಹಸಿವ ಕತ್ತಲೆಯ ಕತ್ತಲೊಳಗೇ ಬಿಟ್ಟು
ಮನದ ಕತ್ತಲೆಯ ಮಾತಾಡುವವರಿಗೆ
ಕತ್ತಲಿಗಿರದ ಈ ತರತಮ
ಈ ಬೆಳಕಿಗಿರುವುದು ತಿಳಿಯದಾಗಿದೆ!

ಬೆಳಕೂ ಈಗ‌ ಮೊದಲಿನಂತಿಲ್ಲ
ಕಾಲಕ್ಕೆ ತಕ್ಕಂತೆ ಬದಲಾಗಿದೆ

-ಮಹಮ್ಮದ್ ರಫೀಕ್ ಕೊಟ್ಟೂರು,
ಅಗಳಕೇರಾ, ಕೊಪ್ಪಳ‌ ಜಿಲ್ಲೆ.
*****