ಕವಿ ಪರಿಚಯ:
ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿರುವ ಸಾಹೇಬಗೌಡ ಯ ಬಿರಾದಾರ ಅವರು ಕವಿಗಳು, ಲೇಖಕರು ಮತ್ತು ಸಾಹಿತ್ಯಿಕ ಸಂಘಟಕರು. ತಮ್ಮ ಆಕರ್ಷಕ ನಿರೂಪಣೆ ಹಾಗೂ ಪ್ರಬುದ್ಧ ಮಾತುಗಾರಿಕೆಯಿಂದ ನೂರಾರು ಪ್ರವಚನ, ಉಪನ್ಯಾಸಗಳನ್ನು ನೀಡಿ ಜನಮನ ಗೆದ್ದವರು. ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು.
ಸಾಹಿತ್ಯ ಲೋಕಕ್ಕೆ ನಾಲ್ಕು ಕೃತಿಗಳನ್ನು ನೀಡಿರುವ ಶ್ರೀಯುತರು ಶೀಘ್ರದಲ್ಲಿ ಆರು ಪುಸ್ತಕಗಳನ್ನು ಅರ್ಪಿಸುತ್ತಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಂದಾರ ಸಿರಿ ಆದರ್ಶ ಶಿಕ್ಷಕ ಪ್ರಶಸ್ತಿ ಸೇರಿದಂತೆ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬಹುಮುಖ ಪ್ರತಿಭೆ ಸಾಹೇಬಗೌಡ ಯ ಬಿರಾದಾರ ಅವರ ‘ನೆತ್ತಿಗುಪದೇಶ ಹೊಟ್ಟಿ ತುಂಬುವುದಿಲ್ಲ…..’ ಕವಿತೆ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ…👇
ನೆತ್ತಿಗುಪದೇಶ ಹೊಟ್ಟಿ ತುಂಬುವುದಿಲ್ಲ…..
ಬದಲಾಗುವ ಬಣ್ಣದ ಗೊಂಬೆಯೇ ನಿನ್ನದೊಂದು ಬಣ
ಜಣಜಣ ಲೋಕದಲ್ಲಿ ಬಣಗುಟ್ಟುವ ನಾನು ಕಾಣುವುದಿಲ್ಲ
ಬಣವೆಯೇ ಹೊತ್ತಿ ಉರಿಯುವಾಗ ನಿನ್ನದೊಂದು ಮೌನ
ಒಣ ರವದಿ ಹೊದ್ದು ಮಲಗಿದವ ನಾ ಇನ್ನು ಬದಕುವುದಿಲ್ಲ
ಹೊಟ್ಟೆ ಹಸಿವಿನುರಿಗೆ ಮಾಂಸಖಂಡ ರಕ್ತ ಬತ್ತಿಹೋಯ್ತು
ನೆತ್ತಿಗುಪದೇಶ ನೀಡಿದರೇನು ನನ್ನ ಒಡಲು ಬಲಿಯುವುದಿಲ್ಲ
ಸಾವ್ ಮನೆ ಮುಂದೆ , ನಿನ್ನ ಕಿರುನಗು ಸಿಡಿದ ಸಾವಿರ ಸಿಡಿಲ
ಬದುಕ ಸಾವಿರದಾರಿ,ಸಾವಿಗೊಂದೆ ದಾರಿ ನಾ ಅಳುವುದಿಲ್ಲ
ನಿನ್ನೊಡಲಿನ ಬಯಲ ಬೀಜಗಳೆಲ್ಲ ಮೊಳಕೆಯೊಡದಿವೆ
ನಾನೀಗ ಬಯಲ ತೊಟ್ಟಿಲ ಕಟ್ಟಿ ಹಾಡು ಹೇಳಲಾಗುವುದಿಲ್ಲ
ತೆಳು ತನುವಿಗೆ ಲೆಕ್ಕಹಾಕುವ ಜನರ ಮಧ್ಯ ನೀನಿರುವಾಗ
ಮನಸ್ಸಿಗೆ ಬೆಲೆ ಕೊಡುವ “ಸಾಹೇಬ” ನಿನಗೆ ಕಾಣುವುದಿಲ್ಲ
ಹುಟ್ಟು ಸಾವುಗಳಿಗೆ ಒಂದಿನಿತು ಲೆಕ್ಕವೇ ಇಲ್ಲದಿರುವಾಗ
ಅದನ್ನೆಲ್ಲ ಮೀರಿ ನಿಂತ ಈ ” ಗೌಡ” ನ ಮಾತು ಕೇಳುವುದಿಲ್ಲ
-ಸಾಹೇಬಗೌಡ ಯ ಬಿರಾದಾರ
ಶಿಕ್ಷಕರು,ಸರಕಾರಿ ಪ್ರೌಢಶಾಲೆ ಹೆಗ್ಗನದೊಡ್ಡಿ
ತಾ.ಸುರಪುರ.ಜಿ.ಯಾದಗಿರಿ &
ನಿರ್ವಾಹಕರು
ಚಿತ್ರಕಾವ್ಯ ಅಭಿಯಾನ,ಕರ್ನಾಟಕ.
7337653589
*****