ಅನುದಿನ ಕವನ-೩೧೭, ಕವಿ: ಬಾವಾಖಾನ ಎಂ.ಡಿ. ಸುತಗಟ್ಟಿ, ಬೆಳವಡಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್

ಕನಸು ಕಾಣುತ ಕನ್ಯೆಯ ಕೆನ್ನೆ ಕೆಂಪಾಗಲು ಚಿತ್ತ ಎತ್ತಲೋ ಸಾಗುತಿದೆ||
ಅಧರಗಳು ಮಧುರ ಗಳಿಗೆಗೆ ಕಾಯುತಿರಲು ಚಿತ್ತ ಎತ್ತಲೋ ಸಾಗುತಿದೆ||

ಮನದ ಬಯಕೆಗಳು ಮನಭಾರವಾಗುತಿವೆ|
ಮನಸ್ಸುಗಳು ಹೊಸೆಯದೆ ಕನಸುಗಳು ಕರಗಲು ಚಿತ್ತ ಎತ್ತಲೋ ಸಾಗುತಿದೆ||

ಕವಲು ದಾರಿಗಳು ಕಲಹದ ಕುಲುಮೆಯಾಗುತಿವೆ|
ಒಲುಮೆ ಒಸರುವ ಹೃದಯ ಹುಸಿಯಲು ಚಿತ್ತ ಎತ್ತಲೋ ಸಾಗುತಿದೆ||

ಒಡೆದ ಕನ್ನಡಿಯೊಳಗೆ ಬಿಂಬಗಳೆರಡು ಕಾಣುತಿವೆ|
ಇಂಬು ಕಾಣದ ಕಣ್ಣುಗಳಿಗೆ ಕತ್ತಲು ಕವಿಯಲು ಚಿತ್ತ ಎತ್ತಲೋ ಸಾಗುತಿದೆ||

‘ಗಟ್ಟಿಸುತ’ನ ಪ್ರೀತಿಯ ಗುಟ್ಟು ಅರಿಯದ ದರ್ದಿನೊಳಗೆ ನರಳುತಿವೆ|
ವಿರಸದ ಮಹಲಿನಲ್ಲಿ ಮೊಹಬ್ಬತ್ತಿನ ಮಧು ಹೀರಲು ಚಿತ್ತ ಎತ್ತಲೋ ಸಾಗುತಿದೆ||

-ಬಾವಾಖಾನ ಎಂ.ಡಿ. ಸುತಗಟ್ಟಿ, ಬೆಳವಡಿ
*****