ಕಸಾಪದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಗುರಿ -ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ರಾಜಶೇಖರ ಮುಲಾಲಿ

 

 

 

 

ಬಳ್ಳಾರಿ, ನ.17: ಕಸಾಪ ರಾಜ್ಯಾಧ್ಯಕ್ಷರಾಗಿ ತಾವು ಆಯ್ಕೆಯಾದರೆ ಪರಿಷತ್ತಿನ ವಾಹನ ಮತ್ತು ವೇತನ ಪಡೆಯದೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಅಣ್ಣಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ‌ ಹೋರಾಟಗಾರ ರಾಜಶೇಖರ ಮುಲಾಲಿ ಅವರು ಹೇಳಿದರು.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮತ ಯಾಚಿಸಿದ್ದೇನೆ. ಎಲ್ಲಾ ಕಡೆ ಕಸಾಪ ಆಜೀವ ಸದಸ್ಯರಿಂದ ತಮಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ನಾಡು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದು:ಸ್ಥಿತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ನಾಡಿನ ತುಂಬ ಎದ್ದು ಕಾಣುತ್ತಿವೆ. ಇವುಗಳ ಪರಿಹಾರಕ್ಕೆ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಪ್ರಾಮಾಣಿಕ
ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಕಸಾಪದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಗುರಿ. ಮುಕ್ತ ಸಾಹಿತ್ಯ ಪರಿಷತ್ತು, ಯುವ ಜನಾಂಗ ಮತ್ತು ಇಚ್ಛಾಶಕ್ತಿಯುಳ್ಳ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್ತಿನ ವಲಯದಲ್ಲಿ ಗುರುತಿಸುವುದು ತಮ್ಮ ಆದ್ಯತೆಯಾಗಿದೆ ಎಂದರು.
ನವ್ಯ-ಕಾವ್ಯ-ಬಂಡಾಯದ ಪರಂಪರೆ ಹೊಂದಿರುವ ಕನ್ನಡ ನಾಡಿನ ಸಾಹಿತ್ಯ ಪರಿಷತ್ತನ್ನು ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ ಹಾಕಿಕೊಳ್ಳಲಾಗುವುದು. ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಬ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿಯಾಗಿದೆ ಎಂದು ವಿವರಿಸಿದರು.
ಪರಿಷತ್ತನ್ನು ಸಮಾಜಮುಖಿಯಾಗಿ, ಜಾತ್ಯಾತೀತವಾಗಿ, ಭ್ರಷ್ಟಾಚಾರ ಮುಕ್ತವಾಗಿ ಕೊಂಡೊಯ್ಯುವ ಕನಸಿದೆ. ಕಸಾಪದಲ್ಲಿ ಮಹಿಳಾ, ರೈತ, ಯುವ,ವಕೀಲ, ವೈದ್ಯ ಘಟಕಗಳಲ್ಲದೇ ಪತ್ರಕರ್ತರ ಘಟಕ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸಾಹಿತ್ಯ ಪರಿಷತ್ತು ರಾಜಕಾರಣದ ಸಂಕೊಲೆಗೆ ಸಿಲುಕುತ್ತಿರುವುದು ವಿಷಾಧದ ಸಂಗತಿ. ಈ ಬಾರಿ ಕೆಲವು ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲಿಸಿರುವುದು ಸರಿಯಲ್ಲ. ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತವಾಗಿರುವ ಪರಿಷತ್ ಗೆ ರಾಜಕೀಯಲೇಪ ಹಚ್ಚುವುದನ್ನು ತಾವು ವಿರೋಧಿಸುವುದಾಗಿ ತಿಳಿಸಿದರು.
ಸಾಹಿತ್ಯ ಪರಿಷತ್ತನ್ನು ಬರೀ ಒಂದು ಸಂಸ್ಥೆಯಾಗಿ ನೋಡದೇ ಇಡೀ ಕನ್ನಡಿಗರ ಅಸ್ಮಿತೆಯಾಗಿ ರೂಪಿಸುವ ಪ್ರಾಮಾಣಿಕ ಆಶಯಗಳಿಗೆ ಪೂರಕವಾಗಿ ದುಡಿಯುತ್ತೇನೆ ಎಂದು ಮುಲಾಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಎಸ್.ಜಿ ಪಾಟೀಲ್, ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರ ಗೌಡ, ಸಾಹಿತಿ ಗಿರೀಶ್ ಮಳವಳ್ಳಿ, ಯುವ ಮುಖಂಡ ಫ್ರಫುಲ್ ಪಾಟೀಲ್ ಮತ್ತು ಸಾಮಾಜಿಕ ಕಾರ್ಯಕರ್ತ ಬಾಡದ ಬದ್ರಿನಾಥ್ ಉಪಸ್ಥಿತರಿದ್ದರು.
*****