ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಿರಂತರ ಸಾಹಿತ್ಯಿಕ ಸಾಂಸ್ಕೃತಿಕ ವಾತಾವರಣ ನಿರ್ಮಾಣ ತಮ್ಮ ಗುರಿ – ಹಿರಿಯ ಪತ್ರಕರ್ತ, ಕಸಾಪ ಅಭ್ಯರ್ಥಿ ಸಿ.ಮಂಜುನಾಥ್

ಬಳ್ಳಾರಿ, ನ.18: ನಿರಂತರ ಸಾಹಿತ್ಯ, ಜಾನಪದ, ರಂಗಭೂಮಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದು ತಮ್ಮ ಸಂಕಲ್ಪವಾಗಿದೆ ಎಂದು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಬಳ್ಳಾರಿ ಜಿಲ್ಲಾ ಕಸಾಪ ಅಭ್ಯರ್ಥಿ ಸಿ.ಮಂಜುನಾಥ್ ತಿಳಿಸಿದರು.
ನಗರದ ಪತ್ರಿಕಾ‌ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪ್ರತಿ ತಿಂಗಳು ಸಾಹಿತ್ಯ ಅವಲೋಕನ, ಸಂಸ್ಕೃತಿ ಸಂವಾದ, ನಾಡಿನ, ಜಿಲ್ಲೆಯ ಹಿರಿಯ ಸಾಹಿತಿಗಳೊಂದಿಗೆ ಚರ್ಚಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಜಿಲ್ಲೆಯ 11 ತಾಲೂಕುಗಳಲ್ಲಿ ಕನಿಷ್ಟ ಮೂವರು ಮಹಿಳೆಯರನ್ನು ಅಧ್ಯಕ್ಷರನ್ನಾಗಿಸುವುದು ತಮ್ಮ ಆದ್ಯತೆ ಎಂದು ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಗೆ ತರುವುದು. ಪ್ರತಿ ವರ್ಷ ಶಿಕ್ಷಕರು, ಮಹಿಳೆ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು.
ತಾವು ಅಧ್ಯಕ್ಷರಾಗಿ ಚುನಾಯಿತರಾದರೆ ಅವಿಭಜಿತ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯದಲ್ಲಿಯೇ ಮಾದರಿ ಘಟಕವನ್ನಾಗಿ ರೂಪಿಸಲು ಶ್ರಮಿಸುತ್ತೇನೆ. ವರ್ಷಕ್ಕೊಮ್ಮೆ ಯುವ ಸಾಹಿತಿಗಳಿಗೆ, ಯುವ ಪತ್ರಕರ್ತರಿಗೆ ಕಮ್ಮಟ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು.
ಮನೆ ಮನೆ, ಶಾಲೆ, ಕಾಲೇಜು, ಹಳ್ಳಿ ಹಳ್ಳಿಗೆ ಕಸಾಪವನ್ನು ಕೊಂಡಯ್ಯುವುದು ಹಾಗೂ
ಕಸಾಪದಲ್ಲಿ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ.
ಕಸಾಪ ದತ್ತದಾನಿಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಕನ್ನಡ ಭವನ ಇಲ್ಲದ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಸಂಸದರು, ಶಾಸಕರ ಅನುದಾನ ಪಡೆದುಕೊಂಡು ಕನ್ನಡ ಭವನಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕಸಾಪ ಸದಸ್ಯರ ಸಂಖ್ಯೆಯನ್ನು ದಾಖಲೆ ಪ್ರಮಾಣದಲ್ಲಿ ಅಭಿಯಾನದ ಮೂಲಕ ಹೆಚ್ಚಿಸುವುದು. ಕಸಾಪ ಜಿಲ್ಲಾ ಘಟಕದ ಚಟುವಟಿಕೆಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರಪಡಿಸಲಾಗುವುದು ಎಂದು ಹೇಳಿದರು.
ಕಸಾಪ ಕಾರ್ಯಕ್ರಮಗಳನ್ನು ವಿಡಿಯೋ ಆಡಿಯೋ ದಾಖಲೀಕರಣ, ಬಳ್ಳಾರಿ ಜಿಲ್ಲೆಯಾದ್ಯಂತ ದಾನಿಗಳಿಂದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಶಾಲೆ, ಕಾಲೇಜುಗಳ ಅಗತ್ಯ ಗ್ರಂಥಾಲಯಗಳಿಗೆ ತಲುಪಿಸಲಾಗುವುದು ಎಂದರು.

ಸಿ.ಮಂಜುನಾಥ್ ಅವರನ್ನು ಬೆಂಬಲಿಸಿದ ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಗಂಗಾಧರ ಪತ್ತಾರ ಅವರು ಇದೇ ಸಂದರ್ಭದಲ್ಲಿ ಪ್ರಚಾರದ ವಿಡಿಯೋ ಆಡಿಯೋ ಕ್ಲಿಪ್ ಗಳನ್ನು ಉದ್ಘಾಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಮರ ಸೇನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ ಕೋಳೂರು ಉಪಸ್ಥಿತರಿದ್ದರು.


*****