ಅನುದಿನ ಕವನ-೩೨೧, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಅರಿವಿನ ದೀಪ ಹಚ್ಚು

ಅರಿವಿನ ದೀಪ ಹಚ್ಚು

ಅರಿವಿನ ದೀಪ ಹಚ್ಚಬೇಕು ಮರುಳ
ಬದುಕಾಗುವುದು ಬೆಣ್ಣೆ ತಿಂದಷ್ಟು ಸರಳ
ಬದುಕಿಗೆ ಕಷ್ಟಗಳು ಬರುವವು ಬಲು ವಿರಳ.

ತೋರಬೇಡ ಒಂದು ಬೆರಳ
ಕತ್ತರಿಸಬೇಡ ಸಂಬಂಧದ ಕರುಳ
ನಮ್ಮ ಬೆನ್ನೇ ಕಾಣುವುದಿಲ್ಲ ಮರುಳ.

ಕೊರಗಬೇಡ ಚಿಂತೆಯಲ್ಲಿ ನರಳಿ
ಹೋದ ಮಾತು ಬರುವುದಿಲ್ಲ ಹೊರಳಿ
ಹೋದದ್ದಕ್ಕೆ ಚಿಂತಿಸಬೇಡ ಮತ್ತೆ ಮರಳಿ.

ಮನಸಾದರೆ ಕೆಟ್ಟ ದುರುಳ
ಕಳೆವುದು ಸುಖ ಸಂಸಾರದ ಹುರುಳ
ಉರುಳಿಗೆ ಒಡ್ಡುವುದು ಮನುಜ ಕೊರಳ.

ಬಾಡಿದ ಹೂವು ಬರುವುದಿಲ್ಲ ಅರಳಿ
ಕಳೆದು ಚಿಂತಿಸಿದರೆ ಫಲವಿಲ್ಲ ಮರಳಿ
ಮತ್ತೆ ನೆನೆದು ಸಾಯಬೇಡ ನರಳಿ ನರಳಿ.

ಬಾಡದಿರಲಿ ಹಸಿರು ಬಳ್ಳಿ
ಕಷ್ಟಗಳು ಬಾರದಿರಲಿ ಹೊಳ್ಳಿ
ಬದುಕು ಕಟ್ಟಿಕೊಡುವುದು ಹುಟ್ಟಿದ ಹಳ್ಳಿ.

ಕತ್ತರಿಸಬೇಡ ಕರುಳ ಬಳ್ಳಿ
ಹೋಗಬೇಡ ಹುಟ್ಟಿದೂರು ತಳ್ಳಿ
ಬದುಕಿಗೆ ಇಟ್ಟುಕೊಳ್ಳಬೇಡ ಕೊಳ್ಳಿ.

ಸುಗಂಧ ಸೂಸಲಿ ಹೂವರಳಿ
ಹೋದ ಕಷ್ಟ ಬಾರದಿರಲಿ ಮರಳಿ
ಚದುರಂಗ ಆಗದಿರಲಿ ಮನಸು ಕೆರಳಿ

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಧ್ಯಾಪಕರು ಸರಕಾರಿ ಪದವಿ ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ.
*****