ಬೆಳದಿಂಗಳಾದವಳು….
ಮೋಡ ಕರಗಿ ಎಡಬಿಡದೆ ಸುರಿವ ಮಳೆ
ಮೈಕೊರೆವ ತಣ್ಣನೆಯ ಚಳಿಯ
ಕಾರ್ತೀಕದ ಹುಣ್ಣಿಮೆಯ ಕಾರ್ಗತ್ತಲಲ್ಲೂ
ಅವನ ನೆನಪಿನಪ್ಪುಗೆಯಲ್ಲಿ
ಒರಗಿ ಕರಗಿ ಬೆಚ್ಚಗಾದವಳು….
ಬೀಸುವ ಥಂಡಿಗಾಳಿಗೆ ಹೊಸ್ತಿಲದೀಪ
ಆರದಂತೆ ಅಂಗೈಲಿಡಿದು ಕಾಯುತ್ತಾ
ಕತ್ತಲಲ್ಲೂ ಕಣ್ಣನೆಟ್ಟು , ಎದೆಯೊಳಗೆ
ಬಣ್ಣಬಣ್ಣದ ಕಿಡಿಯ ಮತಾಪು ಹೊತ್ತಿಸಿದವಳು…
ಕಗ್ಗತ್ತಲ ಹೆಗಲ ಕಂಪೌಂಡಿನುದ್ದಕ್ಕೂ
ನೂರು ಪಿಸುಮಾತಿನ ಕತೆಯ ಸಾಲಲ್ಲಿ
ಮಳೆಯ ಕಂಬಳಿಯೊಳಗೆ ಅವಿತು
ಕಾಡುವ ಚಂದಿರನದ್ದೊಂದೇ ಹಠ….
ಬೆಳದಿಂಗಳ ಮೊಗ ತೋರುವುದಿಲ್ಲವೆಂದು
ಮುಖಮರೆಸಿ ರಚ್ಚೆ ಹಿಡಿದು ಕೂತ ಚಂದ್ರನನ್ನು
ಬೊಗಸೆಯಲ್ಲಿ ಬೆಳಕ ಹಿಡಿದು ಈ ಸರಿರಾತ್ರಿಯಲ್ಲೂ
ಹುಡುಕುತ್ತಿದ್ದಾಳಿವಳು….
ಹುಡುಕುತ್ತಾ ತಾನೇ ಬೆಳದಿಂಗಳಾದವಳು…
ಅರೇ….ಮುದ್ದು ಪೆದ್ದು ಚಂದಿರ ಎಲ್ಲಿದ್ದೀ ನೀನು?
ಕರುಣೆಯಿಲ್ಲವೇ? ಇವಳು ನಿನ್ನಂತರಂಗದ ಕಣ್ಣು….
-ಡಾ. ಕೆ.ಎನ್. ಲಾವಣ್ಯ ಪ್ರಭ, ಮೈಸೂರು
*****