ಮಳೆ-ಮಳೆ ನಾಲ್ಕು ಹನಿಗಳು..
1 ಪರಿಣಾಮ..!
ಮೇಘಗಳ
ಮುಗಿಯದ ಪ್ರಣಯ
ಇಳೆಯಲಿ
ಅಕ್ಷರಶಃ ಜಲಪ್ರಳಯ.!
2 ಆಕ್ರಮಣ..!
ವರುಣ ಬಾನಗಲ
ಬುವಿಯಗಲ ಹಬ್ಬಿದ್ದಾನೆ
ಧರಣಿಯನು ತಬ್ಬಿದ್ದಾನೆ
ಅಂಬರದಿಂದ ಅರುಣನನ್ನೇ
ಹೊರ ದಬ್ಬಿದ್ದಾನೆ.!
3 ಕೋಡಿ..!
ಅಕಾಲಿಕ ಮಳೆಯಿಂದ
ಕೆರೆ ಕಟ್ಟೆಗಳಲಷ್ಟೇ ಅಲ್ಲ..
ಬಡವರ ಕಂಗಳಲ್ಲೂ
ಕೋಡಿ ಬಿದ್ದಿದೆ.!
4 ಸಮಾನತೆ.!
ಭೋರ್ಗರೆದ ವರ್ಷಧಾರೆಗೆ
ಬಡವರ ಕೇರಿಯ ಗುಡಿಸಲು
ಸಿರಿವಂತರ ಓಣಿಯ ಮಹಲು
ಒಮ್ಮೆಗೇ ಕುಸಿದು ಬಿದ್ದಿದೆ.!
ಕೊಚ್ಚಿ ಹರಿದಿರುವ ನೀರೊಳಗೆ
ಬಡವನ ಮಣ್ಣಿನ ಭಿಕ್ಷಾಪಾತ್ರೆ
ಬಲ್ಲಿದನ ಚಿನ್ನದ ಹರಿವಾಣ
ಒಟ್ಟೊಟ್ಟಿಗೇ ತೇಲುತಿದೆ..!!
-ಎ.ಎನ್.ರಮೇಶ್. ಗುಬ್ಬಿ
*****