ಕನಕ
ಬವಬಂಧನವ ತೊರೆದು ನೀ ತೋರಿದ ದಾರಿಯಲಿ ನನ್ನನ್ನು ನಡೆಸು ಕನಕ.
ಮದಮತ್ಸರವ ಕುದಿಸಿ ನೀ ಭಕ್ತಿಯ ಪಾಯಸವ ಉಣಿಸು ಕನಕ.
ಕುಲದ ಹಂಗಿನ ಹಗ್ಗವನು ಭಕ್ತಿಯ ರಾಟಿಯಲಿ ನೇಯ್ದವರು ನೀವು.
ಕುಲ ಕುಲವೆಂದು ಹೊಡೆದಾಡುವವರಿಗೆ ಕುಲದ ಮೂಲವನು ಮತ್ತೆ ತೋರಿಸು ಕನಕ.
ಮುಕ್ತಿಗೆ ಜಾತಿಗಿಂತ ಭಕ್ತಿಯೇ ಮೇಲೆಂದವರು ನೀವು.
ನಿನ್ನ ಪವಿತ್ರ ಭಕ್ತಿಯನು ಎಲ್ಲರ ಮನದಲಿ ನೆಲೆಸು ಕನಕ.
ಜಗದ ಜಂಜಾಟದಲ್ಲಿ ಭಗ್ನಗೊಂಡ ಮನಸುಗಳು ವಿಗ್ನಗೊಂಡಿವೆ.
ವಿಕೃತಗೊಂಡ ನಾಲಿಗೆಯ ಮೇಲೆ ಸುಕೃತವ ನುಡಿಸು ಕನಕ.
ನಿನ್ನ ಕೀರ್ತನಗಳನೆ ಹಾಡಿ ದಾರಿ ದೀಪವಾಗಿಸಿದ್ದಾಗಿದೆ.
ಕೃಷ್ಣ ಕನಕನಗಲಿಸುವವರಿಗೆ ಕರಿಕಂಬಳಿಯ ಹೊದಿಸು ಕನಕ
-ಅಂಕಲಿ ಬಸಮ್ಮ
ವಡ್ಡು
*****