ಅನುದಿನ‌ಕವನ-೩೨೮, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್

ಗಜಲ್

ಅರ್ಥವೇ ಇರದ ದಾರಿಯಲಿ ನಡೆಯುವುದು ಬೇಡಬಿಡು
ಕಣ್ಣೇ ಇರದಿರುವಲಿ ಕನಸುಗಳ ಕಾಣುವುದು ಬೇಡಬಿಡು

ನೆಲದ ರೋದನ ಒಣಮರದ ಟೊಂಗೆಗಳಾಗಿ ಕೈಚಾಚಿವೆ
ಹಸಿದನಿಯೇ ಇರದ ಮರಳಿನಲಿ ಚಿಗುರುವುದು ಬೇಡಬಿಡು

ಬರೀ ಧೂಳಿಡಿದ ಬದುಕಿನಲಿ ಸಂಜೆಯೂ ಮಂಕಾಗಿಹುದು
ವಾಸವಿರದ ಮನೆಯಲಿ ದೀಪ ಬೆಳಗಿಸುವುದು ಬೇಡಬಿಡು

ನಲಿವಿನ ಕಣ್ಣಿನ ಕಪ್ಪನ್ನೇ ಕುಕ್ಕಿ ಕುಕ್ಕಿ ತಿನ್ನುತಿವೆ ಕಾಗೆಗಳು
ಖಾಲಿಯಾದ ರಂಗಮಂಟಪದಿ ನರ್ತಿಸುವುದು ಬೇಡಬಿಡು

ಬಿಳಿ ಕ್ಯಾನ್ವಾಸಿನಲೇ ಭ್ರಮೆಯ ಬಣ್ಣ ತುಂಬುತಿಹರು ಸಿದ್ಧ
ಬೇರೆಯವರ ವಿಷಯದಲಿ ತಲೆತೂರಿಸುವುದು ಬೇಡಬಿಡು

-ಸಿದ್ಧರಾಮ ಕೂಡ್ಲಿಗಿ
*****