ಅನುದಿನ ಕವನ: ೩೩೪, ಕವಿ: ಕಾಡಜ್ಜಿ ಮಂಜುನಾಥ, ಕಮಲಾಪುರ, ಕವನದ ಶೀರ್ಷಿಕೆ: ಅಪ್ಪ ಮೌನವಾಗಿದ್ದಾನೆ….!!

ಕವಿ ಪರಿಚಯ: ಕಾಡಜ್ಜಿ ಮಂಜುನಾಥ
ತಂದೆ ಹೆಸರು:ಕಾಡಜ್ಜಿ ಸಿದ್ದಪ್ಪ
ಜನ್ಮ ದಿನಾಂಕ:30-06-1987
ಶಿಕ್ಷಣ :ಎಂ ಎ ಇತಿಹಾಸ,
ಪ್ರಸ್ತುತ ಸಂಶೋಧನಾ ವಿದ್ಯಾರ್ಥಿಯಾಗಿ ಚರಿತ್ರೆ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ.
ಉದ್ಯೋಗ: ಶಿಕ್ಷಕರು ,ಸ.ಕಿ‌.ಪ್ರಾ.ಶಾಲೆ ನಲ್ಲಾಪುರ ಹೊಸಪೇಟೆ ತಾಲೂಕು ವಿಜಯನಗರ ಜಿಲ್ಲೆ
ಹವ್ಯಾಸಗಳು:ಕಥೆ,ಕವನ, ಚುಟುಕು, ಹಾಯ್ಕು,ಲೇಖನ , ಪ್ರಬಂಧ ಬರೆಯುವುದು.ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು, ಸಂಗೀತ ಹಾಡುವುದು ಮತ್ತು ಕೇಳುವುದು.ಪತ್ರಿಕೆಗಳನ್ನು , ಕಾದಂಬರಿ, ಸಂಶೋಧನಾ ಲೇಖನಗಳು , ಪುಸ್ತಕಗಳನ್ನು ಓದುವುದು.ಕ್ರಿಕೆಟ್ ಆಡುವುದು.ಇತ್ಯಾದಿ.
ಕವನಸಂಕಲನಗಳು: ೧.ಚೈತ್ರದ ಸಿರಿ ೨.ತಬ್ಬಲಿಗಳ‌ ತಲ್ಲಣ
ಪ್ರಶಸ್ತಿಗಳು:೧.ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇವರು ನನ್ನ ಅಪ್ರಕಟಿತ ಕವನ ಸಂಕಲನ “ಚೈತ್ರದ ಸಿರಿ”ಕವನ ಸಂಕಲನಕ್ಕೆ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ ನೀಡಿ ಗೌರವಿಸಿದೆ.
೨.ರಾಜ್ಯ ಬರಹಗಾರರ ಬಳಗ ರಾಜ್ಯ ಘಟಕ ಹೂವಿನ ಹಡಗಲಿ ತಾಲೂಕು ಘಟಕ ಹೊಸಪೇಟೆಯವರು ಶೈಕ್ಷಣಿಕ ಸೇವೆ ಮತ್ತು ಸಾಹಿತ್ಯ ಸೇವೆಯನ್ನು ಗುರುತಿಸಿ “ಶಿಕ್ಷಣ ಸಿರಿ “ಪ್ರಶಸ್ತಿ ನೀಡಿ ಗೌರವಿಸಿದೆ.
೩.ರಾಜ್ಯಮಟ್ಟದ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದಿರುತ್ತಾರೆ
*****
ಇಂದಿನ ಅನುದಿನ ಕವನದ ಗೌರವಕ್ಕೆ ಕಾಡಜ್ಜಿಮಂಜುನಾಥ ಅವರ ‘ಅಪ್ಪ ಮೌನವಾಗಿದ್ದಾನೆ’ ಕವಿತೆ ಪಾತ್ರವಾಗಿದೆ…..👇

ಅಪ್ಪ ಮೌನವಾಗಿದ್ದಾನೆ…!!

ಅಪ್ಪ ಮೌನವಾಗಿದ್ದಾನೆ
ಈಗೀಗ ಮಾತು ಕಮ್ಮೀ
ಮುಂಚೆಯಾದರೂ ಬೈಯುತ್ತಿದ್ದ
ಕೆಲಸ ಮಾಡು ಎನ್ನುತ್ತಿದ್ದ
ದಾರಿ ತಪ್ಪಿದರೆ
ಬೆದರಿಸುತ್ತಿದ್ದ
ಕನಸಿನ ಗೋಪುರ ಮಗನಲಿ
ಕಟ್ಟಿ ನೀರೆಯುತ್ತಿದ್ದ
ಅನಾರೋಗ್ಯಕ್ಕೆ ತಪ್ಪದೆ
ಬೆಟ್ಟದಂತೆ ಜೊತೆ ನಿಲ್ಲುತ್ತಿದ್ದ
ಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧ
ಎಂದು ಓದಲೇಬೇಕು ಎಂದು
ಗದರಲಿಲ್ಲ
ಚಾಡಿಕೋರರರಿಗೆ ಕಿವಿಯಾಗಲಿಲ್ಲ
ನಂಬಿಕೆಯ ಗೋಡೆ ಮಗನಲ್ಲಿ
ನಿರ್ಮಿಸಿದ
ಅರಮನೆಯಂತಹ ಸೌಧವಾಗಿಸಿದ
ಬದುಕು ಕಲಿಸಿ
ಬೆವರಲಿ ರಕ್ತ ಹರಿಸಿ
ಸಾಧನೆಗೆ ಬೆನ್ನೆಲುಬಾಗಿ ನಿಂತ
ಕನಸು ನನಸಾಗಿದ್ದಕ್ಕೆ
ಅಪ್ಪ ಮೌನಿಯಾಗಿ
ಖುಷಿ ಪಟ್ಟಿದ್ದಾನೆ
ಭಾರತರತ್ನ ಪಡೆದಂತೆ
ಕಂಬನಿ ಮಿಡಿದಿದ್ದಾನೆ
ಆದರೆ
ಅವನು ಆಡಿದ ಪ್ರತಿ ಮಾತು
ಕಿವಿಯ ತಮಟೆಯಲ್ಲಿ
ಬಿಜಾಪುರದ ಗೋಲ ಗುಮ್ಮಟದಂತೆ
ಪಿಸುಗುಡುತ್ತ
ಸದಾ ಎಚ್ಚರಿಸುತ್ತಿದೆ

-ಕಾಡಜ್ಜಿ ಮಂಜುನಾಥ,
ಕಮಲಾಪುರ ಹೊಸಪೇಟೆ ತಾ. ವಿಜಯನಗರ ಜಿಲ್ಲೆ