ಹಾಡುವ ಕೋಗಿಲೆಗೂ ಕೊವೀಡ್: ಡಾ. ಬಾನಂದೂರು ಕೆಂಪಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು, ಡಿ.8: ಕರ್ನಾಟಕ‌ ಜಾನಪದ ಅಕಾಡೆಮಿ‌ ಮಾಜಿ ಅಧ್ಯಕ್ಷ, ಹಾಡುವ ಹಕ್ಕಿ ಡಾ.‌ಬಾನಂದೂರು ಕೆಂಪಯ್ಯ ಅವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದು ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ವಾರ ನಗರದ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ. ಬಾನಂದೂರು ಅವರಿಗೆ ಜ್ವರ ಬಂದಿದ್ದರಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜ್ವರ ಕಡಿಮೆಯಾಗದ್ದರಿಂದ ಕೊವೀಡ್ ಪರಿಕ್ಷೆಗೆ ಒಳಗಾಗಿದ್ದಾರೆ. ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ ಸೋಮವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಡಾ. ಬಾನಂದೂರು ಅವರು ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು.


71 ವರ್ಷದ ಡಾ.ಬಾನಂದೂರು ಕೆಂಪಯ್ಯ ಅವರಿಗೆ ಎರಡು ವರ್ಷಗಳ ಹಿಂದೆ‌ ಬೈಪಾಸ್ ಸರ್ಜರಿಯಾಗಿತ್ತು. ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಅವರು 2010ರಲ್ಲಿ ವಯೋ ನಿವೃತ್ತಿ ಪಡೆದಿದ್ದರು. ಬಳಿಕ ಕರ್ನಾಟಕ‌ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಎರಡು ಡೋಸ್ ಕೋವಾಕ್ಸಿನ್ ಪಡೆದಿದ್ದ ಡಾ. ಕೆಂಪಯ್ಯ ಅವರಿಗೆ ಮತ್ತೇ ಕೊರೋನಾ ಸೋಂಕಿಗೆ ಒಳಗಾಗಿರುವುದು ಅಚ್ಚರಿಯಾಗಿದೆ.
ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾಗಿರುವ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ,
ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಟಿ.ಕೆ. ಗಂಗಾಧರ ಪತ್ತಾರ್, ಕರ್ನಾಟಕ‌ ಮಾಧ್ಯಮ‌ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್ , ಹಿರಿಯ ಉದ್ಯಮಿ, ಇಂ. ಎಂ.ಜಿ.ಗೌಡ ಸೇರಿದಂತೆ ಅಪಾರ ಅಭಿಮಾನಿಗಳು, ಹಿತೈಷಿಗಳು ಹಾರೈಸಿದ್ದಾರೆ.
*****