ಹೊಸಪೇಟೆ(ವಿಜಯನಗರ), ಡಿ.8 :ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಡಿ.10ರಿಂದ ಪದವಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಮುಷ್ಕರ ಆರಂಭಿಸುವರು ಎಂದು ಹಿರಿಯ ಅತಿಥಿ ಉಪನ್ಯಾಸಕ ವಿಜಯಕುಮಾರ ಅವರು ಹೇಳಿದರು.
ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯದ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಕನಕೇಶಮೂರ್ತಿ ಅವರ ಮೂಲಕ ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಸುಮಾರು 14ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಹಲವಾರು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರಕಾರವು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ 30ರಿಂದ 40 ಸಾವಿರ ವೇತನವನ್ನು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರಕಾರವು ಅತಿಥಿ ಉಪನ್ಯಾಸಕರಿಗೆ ವರ್ಷದ 12 ತಿಂಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಾಕಷ್ಟು ಭಾರಿ ಮೌಖಿಕವಾಗಿ ಮತ್ತು ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಸರಕಾರವು ಅತಿಥಿ ಉಪನ್ಯಾಸಕರ ನೋವುಗಳಿಗೆ ಸ್ಪಂದಿಸುತ್ತಿಲ್ಲ .ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಹಿಂದೆ ವರ್ಷದ 10 ತಿಂಗಳ ಕಾಲ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. . ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕೇವಲ ಮೂರು ತಿಂಗಳಗಳ ಮಟ್ಟಿಗೆ ಸೇವೆಯನ್ನು ಪರಿಗಣಿಸಿದ್ದಾರೆ ಎಂದರು.
ಸಾಂಕ್ರಾಮಿಕ ಕಾಯಿಲೆ ಕೊರೋನಾ ವೈರಸ್ ಸಮಯದಲ್ಲಿ ಅವರ ಜೀವನ ತುಂಬ ಹೀನಾಯ ಸ್ಥಿತಿಯಲ್ಲಿತ್ತು. ಸರಕಾರವು ಯಾವುದಾದರು ಪರಿಹಾರವನ್ನು ನೀಡುತ್ತದೆ ಎಂದು ಕಾಯುತ್ತಿದ್ದರು. ಆದರೆ ಸರಕಾರ ಅವರ ನಿರೀಕ್ಷೆಗಳನ್ನು ಮತ್ತು ನಂಬಿಕೆಯನ್ನು ಹುಸಿಗೊಳಿಸಿದೆ ಎಂದು ದೂರಿದರು.
ಅನೇಕ ಉಪನ್ಯಾಸಕರು ಎಂ. ಫಿಲ್. ಪಿ.ಹೆಚ್.ಡಿಗಳಂತಹ ಪದವಿಗಳನ್ನು ಮುಗಿಸಿದ್ದರು ಅವರ ಪದವಿಗಳಿಗೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ತರಕಾರಿ ಹಣ್ಣುಗಳ ಮಾರಾಟ ಮಾಡುವುದು ಕೂಲಿ ಕೆಲಸಕ್ಕೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನೋವನ್ನು ವ್ಯಕ್ತ ಪಡಿಸಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ರಾಜ್ಯದ 14 ಸಾವಿರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಅತಿಥಿ ಉಪನ್ಯಾಸಕರಾದ ಡಾ. ಷಣ್ಮುಖಪ್ಪ, ಶ್ರೀಮತಿ ನಾಗವೇಣಿ, ಮುರಳೀಧರ್, ಗಿರೀಶ್ ಕುಮಾರ್, ಮಂಜುನಾಥ್, ಉಜ್ಜಪ್ಪ, ಶ್ರೀಮತಿ ದಂಡಿ ಪದ್ಮಜ, ವೈ.ಚನ್ನಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದರು.
*****