ಬಳ್ಳಾರಿ, ಡಿ.10: ಕರ್ನಾಟಕ ವಿಧಾನ ಪರಿಷತ್ತಿನ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರಕ್ಕೆ ಡಿ.10 ರಂದು ಶುಕ್ರವಾರ ಮತದಾನ ನಡೆಯಲಿದೆ. ಸುಸೂತ್ರ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ನಗರದ ತಹಶೀಲ್ದಾರ್ ಕಚೇರಿ ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ಗುರುವಾರ ನಡೆಯಿತು.
ಚುನಾವಣೆಗೆ ನಿಯೋಜಿತರಾದ ಸಿಬ್ಬಂದಿಗಳು ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ತಮಗೆ ಸೂಚಿಸಲಾದ ಮತಗಟ್ಟೆಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂದಿತು.
ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ. ಪ್ರಸಕ್ತ ಚುನಾವಣೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 4663 ಮತದಾರರಿದ್ದು 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕ್ಷೇತ್ರದಲ್ಲಿ 2194 ಪುರುಷ ಮತ್ತು 2468 ಮಹಿಳಾ ಮತದಾರರು,01 ಇತರೆ ಸೇರಿದಂತೆ ಒಟ್ಟು 4663 ಅರ್ಹ ಮತದಾರರಿದ್ದಾರೆ.
ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾದ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಿಗೂ ಮತದಾನದ ಹಕ್ಕು ಇದೆ. ಇವರು ಜಿಪಂನಲ್ಲಿ ತೆರೆಯಲಾದ ಮತದಾನ ಕೇಂದ್ರದಲ್ಲಿ ಮತದಾನ ಮಾಡಲಿದ್ದಾರೆ.
247 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ ಪ್ರೊಸಿಡಿಂಗ್ ಆಫೀಸರ್, ಅಸಿಸ್ಟೆಂಟ್ ಪ್ರೊಸಿಂಡಿಂಗ್ ಆಫೀಸರ್, ಪೊಲೀಂಗ್ ಆಫೀಸರ್, ಐಡೆಂಫಿಕೇಶನ್ ಆಫೀಸರ್ ಮತ್ತು ಗ್ರೂಪ್ ಡಿ ಸಿಬ್ಬಂದಿ, ಪ್ರತಿ ಮತಗಟ್ಟೆಗೆ ಓರ್ವ ಮೈಕ್ರೋ ಅಬ್ಸರ್ವರ್ ಇರಲಿದ್ದಾರೆ.
ಮತಗಟ್ಟೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಶಾಂತಿಯುತ ಮತ್ತು ಮುಕ್ತ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಎಲ್ಲ ರೀತಿಯ ಸೂಚನೆಗಳನ್ನು ಜಿಲ್ಲಾಡಳಿತ ನೀಡಿದೆ.
ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ, ಅಪರ ಜಿಲ್ಲಾ ಚುನಾವಣಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅವರು ಮತ ಎಣಿಕೆ ನಡೆಯಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಕೈಗೊಳ್ಳಲಾಗಿರುವ ಇದುವರೆಗಿನ ಸಿದ್ಧತೆ ಪರಿಶೀಲಿಸಿದರು.
ಈ ಚುನಾವಣೆಯಲ್ಲಿ 04 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕೆ.ಸಿ.ಕೊಂಡಯ್ಯ, ಬಿಜೆಪಿಯಿಂದ ಏಚರೆಡ್ಡಿ ಸತೀಶ್, ಪಕ್ಷೇತರರಾಗಿ ಗಂಗೀರೆಡ್ಡಿ ಮತ್ತು ಸಿ.ಎಂ.ಮಂಜುನಾಥ ಅವರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
—