ಕವಯತ್ರಿ ಪರಿಚಯ:
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಮಧುರ ವೀಣಾ ಅವರು ಬಹುಮುಖಿ. ಕಾವ್ಯ ಮತ್ತು ರಂಗಭೂಮಿ ಎಂದರೆ ಇವರಿಗೆ ಆಸಕ್ತಿ ಕ್ಷೇತ್ರಗಳು. ಸೂಕ್ಷ್ಮ ಸಂವೇದನೆಯುಳ್ಳ ಇವರು ಪದ್ಯಗಳನ್ನು ರಚಿಸಿ ಸಂತಸ ಕಾಣುವವರು.
ಪೊಲೀಸ್ ಇಲಾಖೆಗೆ ಸೇರುವ ಮುನ್ನ ರಂಗ ಕರ್ಮಿ, ಪತ್ರಕರ್ತೆ ಹಾಗೂ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಮೈಸೂರಿನ ರಂಗಾಯಣ, ನಟನಾ ರಂಗಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಮಾತ್ರವಲ್ಲ ಆಂಗ್ಲ ಮತ್ತು ಪತ್ರಿಕೋದ್ಯಮ ಉಪನ್ಯಾಸಕರಾಗಿ ಹಾಗೂ ಡೆಕ್ಕನ್ ಹೆರಾಲ್ಡ್ ಬೆಂಗಳೂರು ಕಚೇರಿಯಲ್ಲಿ ಉಪ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಮಧುರ ವೀಣಾ ಅವರ ‘ಸತ್ತವರ ಧ್ಯಾನದಲಿ’ ಕವಿತೆ ಪಾತ್ರವಾಗಿದೆ. 👇
ಸತ್ತವರ ಧ್ಯಾನದಲಿ …
ಸತ್ತವರ ಧ್ಯಾನದಲಿ
ಇದ್ದವರ ದೂಡುವರ
ಏನನ್ನಬೇಕೋ ಗೊತ್ತಿಲ್ಲ …
ಹತ್ತಿರವೇ ಇರುವವರ
ಮುತ್ತಿಗೇ ನಿಲುಕದವರ
ಏನನ್ನಬೇಕೋ ಗೊತ್ತಿಲ್ಲ …
ಮುಂದೆಯೇ ಸುಳಿದಾಡಿ
ಹಿಂದೆಯೇ ಹೊರಳದವರ
ಏನನ್ನಬೇಕೋ ಗೊತ್ತಿಲ್ಲ …
ಮೆತ್ತನೆಯ ಇರುಳಿನಲಿ
ನಿದಿರೆಗೇ ಜಾರದವರ
ಏನನ್ನಬೇಕೋ ಗೊತ್ತಿಲ್ಲ …
ಮುಂದಿರುವ ಸಿಹಿಯನು
ನೋಡುತಾ ಕುಳಿತವರ
ಏನನ್ನಬೇಕೋ ಗೊತ್ತಿಲ್ಲ …
ತುಂಬಿರುವ ಕೊಡವದು
ಖಾಲಿಯೆಂದು ಬಗೆವರ
ಏನನ್ನಬೇಕೋ ಗೊತ್ತಿಲ್ಲ …
ಇಂದು ಇರುವುದ ಬಿಟ್ಟು
ಹಿಂದಿನದ ಬಯಸುವರ
ಏನನ್ನಬೇಕೋ ಗೊತ್ತಿಲ್ಲ …
ಮುಂದೆ ಬರುವುದ ಕಾದು
ಇಂದಿನದ ಮರೆಯುವರ
ಏನನ್ನಬೇಕೋ ಗೊತ್ತಿಲ್ಲ …
-ಮಧುರ ವೀಣಾ, ಬೆಂಗಳೂರು
*****