ವಿಜಯನಗರ(ಹೊಸಪೇಟೆ), ಡಿ.11: : ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರವಾಸೋದ್ಯಮ ಖಾತೆಯನ್ನು ಹೊಂದಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಶನಿವಾರ ಮನವಿ ಪತ್ರವನ್ನು ಸಲ್ಲಿಸಿ ಸಮಸ್ಯೆಗಳನ್ನು ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ದಿನವೂ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಧರಣಿ, ಹೋರಾಟದ ಮೂಲಕ ಅಕ್ರೋಶವನ್ನು ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಪದವಿ ಕಾಲೇಜುಗಳು 2003- 04 ನೇ ಸಾಲಿನಿಂದ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ಪಾಠ, ಪ್ರವಚನವನ್ನು ಅವಲಂಭಿಸಿವೆ. 14800 ಉಪನ್ಯಾಸಕರು ಸರಕಾರ ಕೊಡುವ ಅತಿ ಕಡಿಮೆ ಗೌರವಧನದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮನ್ನಾಳುವ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಅನುಕೂಲದಂತೆ ಕಾಯ್ದೆ ಕಾನೂನುಗಳನ್ನು ತಿದ್ದು ಪಡೆ ಮಾಡಿಕೊಳ್ಳುತ್ತಾರೆ. ಆದರೆ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಬಂದರೆ ಕಾಯ್ದೆಗಳಲ್ಲಿ ಇವರ ಸೇವಾ ಭದ್ರತೆಯನ್ನು ಮಾಡಲಾಗುವುದಿಲ್ಲ. ಅವರ ಕನಿಷ್ಠ ವೇತನ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಮಾಡಲು ಬರುವುದಿಲ್ಲ ಎಂದು ಉಡಾಫೆಯ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.
ಯು.ಜಿ.ಸಿ ಯ ನಿಯಮಾನುಸಾರ ತಿಂಗಳಿಗೆ 50 ಸಾವಿರ ರೂ. ವೇತವನ್ನು ನೀಡಬೇಕು.ಆದರೆ 11 ಸಾವಿರ ಹಾಗೂ 13 ಸಾವಿರ ಗೌರವಧವನ್ನು ನೀಡುತ್ತಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ ಪದವಿ ಶಿಕ್ಷಣವನ್ನು 3 ತಿಂಗಳಿಗೆ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಈ ಹಿಂದಿನ ಸರಕಾರವು ವರ್ಷದ 10 ತಿಂಗಳು ಉಪನ್ಯಾಸವನ್ನು ನಿಗದಿ ಮಾಡಿ ಗೌರವಧನವನ್ನು ನೀಡುತ್ತಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ಹಿಂದಿನ ವರ್ಷದ ಮಾದರಿಯಲ್ಲಿ ಕಾರ್ಯಭಾರವನ್ನು ಸರಕಾರ ಮುಂದುವರಿಸಬೇಕಿದೆ ಎಂದು ಅಕ್ರೋಶವನ್ನು ವ್ಯಕ್ತ ಪಡಿಸಿದರು.
ಕೊರೋನಾ ವೈರಸ್ ಉಪಟಳದ ಕಾಲದಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಹಾಗೂ ಕುಟುಂಬದ ಜೀವನ ಸಾಗಿಸುವುದು ತುಂಬ ಚಿಂತಾಜನಕವಾಗಿದೆ. ಕಾಯಿಲೆಯಲ್ಲಿ ಮೃತಪಟ್ಟಿರುವ ಉಪನ್ಯಾಸಕರ ಕುಟುಂಬಕ್ಕೆ ಈವರೆಗೆ ಯಾವುದೇ ರೀತಿಯಲ್ಲಿ ಪರಿಹಾರಕ್ಕೆ ನೀಡಲು ಮುಂದಾಗಿಲ್ಲ ಎಂದು ಬೇಸರದಿಂದ ಹೇಳಿದರು.
ಸರಕಾರವು ವೇತವನ್ನು ಹೆಚ್ಚಿಸಬೇಕು.ದೆಹಲಿ, ಹರಿಯಾಣ ,ಆಂದ್ರಪ್ರದೇಶ, ಒಡಿಸ್ಸಾ ಮಾದರಿಯಲ್ಲಿ ಸೇವಾ ಭದ್ರತೆಯನ್ನು ಜಾರಿ ಮಾಡಬೇಕಿದೆ. ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ. ತಿಂಗಳಿಗೊಮ್ಮೆ ವೇತವನ್ನು ನೀಡಬೇಕಿದೆ ಎಂದು ಅವರು ಅಸಹಾಯಕತೆಯನ್ನು ತೋಡಿಕೊಂಡರು.
ಸಚಿವ ಆನಂದ ಸಿಂಗ್ ಅವರು ಅತಿಥಿ ಉಪನ್ಯಾಸಕರ ತಮ್ಮ ಸಮಸ್ಯೆಗಳನ್ನು ಆಲಿಸಿ, ಬೆಳಗಾವಿಯ ಚಳಿಗಾಲದ ಅಧಿವೇಶನದ ಗಮನಕ್ಕೆ ತರುವ ಮೊದಲು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿಮ್ಮ ಸಮಸ್ಯೆಗಳನ್ನು ಸ್ಪಂಧಿಸುವಂತೆ ತಿಳಿಸಲಾಗುತ್ತದೆ ಎಂದು ಅವರು ಸಕರಾತ್ಮಕವಾಗಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಡಾ. ಷಣ್ಮುಖಪ್ಪ, ಡಾ.ನಾಗವೇಣಿ, ಉಜ್ಜಪ್ಪ, ದಂಡಿ ಪದ್ಮಜ, ಅಕ್ಕಿ ಮಲ್ಲಿಕಾರ್ಜುನ, ವಾಸುದೇವ, ಪಾಂಡೇಶ, ಡಾ. ಸಂದೀಪ್, ಡಾ.ಎಸ್ ಚೌಡೇಶ, ಡಾ.ಹೆಚ್.ಎಂ ತಿಪ್ಪೇಶ್, ಮಂಜುನಾಥ ವಿರುಪಾಪುರ, ಬಿ.ಕೆ ಮುರಳಿಧರ್, ಮಂಜನಾಥ ಭಂಡಾರಿ, ಹನುಮಂತ, ಪವನ್ ಕುಮಾರ್, ಬಂಡೆ ರಾಮಲೆಪ್ಪ, ಕೆ.ಎಂ. ಸಾವಿತ್ರಿ, ಯಶೋಧ, ಶ್ವೇತಾ, ಐಶ್ವರ್ಯ, ಆರ್.ಉಮಾದೇವಿ, ಜ್ಯೋತಿ, ಸುಮಲತ, ಹನುಮಂತಮ್ಮ, ಮೀನಾಕ್ಷಿ, ಸುಪ್ರಿಯ, ಅಕ್ಷತ, ಸೌಮ್ಯ ಭಾಗವಹಿಸಿದರು.
*****