ತಾಳೂರಿನ ಗಂಗಪ್ಪಗೆ ಕನ್ನಡ ವಿವಿಯಿಂದ ಪಿ.ಎಚ್ ಡಿ ಪದವಿ

ಬಳ್ಳಾರಿ, ಡಿ.12: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಗಂಗಪ್ಪ ಎ ಅವರು ಮಂಡಿಸಿದ ‘ಕನ್ನಡ ರಂಗಭೂಮಿ ಮತ್ತು ಸಿನಿಮಾ – ಅಂತಃಸಂಬಂಧದ ನೆಲೆಗಳು’ ಎಂಬ ವಿಷಯದ ಮಹಾ ಪ್ರಬಂಧಕ್ಕೆ ವಿವಿ ಡಾಕ್ಟರೇಟ್ ಪದವಿ ಘೋಷಿಸಿದೆ.
ವಿವಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎ ಸುಬ್ಬಣ್ಣ ರೈ ಅವರ ಮಾರ್ಗದರ್ಶನದಲ್ಲಿ ಗಂಗಪ್ಪ ಈ ಪ್ರಬಂಧ ಸಿದ್ಧಪಡಿಸಿದ್ದರು.
ಪರಿಚಯ:ಸಿರುಗುಪ್ಪ ತಾಲೂಕಿನ ತಾಳೂರಿನ ಗಂಗಪ್ಪ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದವರು. ಬಳಿಕ ಪಿಯುಸಿ ಮತ್ತು ಬಿಎ (ಐಚ್ಛಿಕ) ಪದವಿಯನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾ.ಪು.) ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್ ಪದವಿಯನ್ನು, ಕನ್ನಡ ವಿವಿಯಲ್ಲಿ ಎಂಎ ಪಿ ಎಚ್ ಡಿ (ಕನ್ನಡ ಸಾಹಿತ್ಯ ಸಂಯೋಜಿತ ಪದವಿ)ಯನ್ನು ಪಡೆದಿದ್ದಾರೆ.
ಇವರ ಮೊದಲ ಪುಸ್ತಕ *ಚೊಚ್ಚಲು*(2020) ಸಂಶೋಧನ ಲೇಖನಗಳ ಪುಸ್ತಕ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಆಯ್ಕೆಯಾಗಿ, ಬಿಡುಗಡೆಯಾಗಿದೆ. *ಬಳ್ಳಾರಿ ಜಿಲ್ಲೆಯ ರಂಗ ಮಾಹಿತಿ’ ಎರಡನೇ ಕೃತಿ ಕರ್ನಾಟಕ ನಾಟಕ ಅಕಾಡೆಮಿಗೆ ಸಲ್ಲಿಸಲಾಗಿದ್ದು, ಪ್ರಕಟಣೆಯ ಹಂತದಲ್ಲಿದೆ.
ಗಂಗಪ್ಪ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಕುರಿತಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದು ಗಮನಾರ್ಹ.
ಅನಂತಪುರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ (ಎಪಿ) ಹೊರ ತಂದ ಸಂಘ ಸಂಸ್ಮರಣಲೋ ಕವುಲ ಕೃಷಿ ರಾಷ್ಟ್ರೀಯ ವಿಚಾರ ಸಂಕಿರಣ ಪುಸ್ತಕದ (ಕನ್ನಡ ವಿಭಾಗ), ಹಾಗೂ ಪ್ರಾಚೀನ ತೆಲುಗು ಸಾಹಿತ್ಯಂ – ಆಧುನಿಕುಲ ಪುನರ್ ಮೌಲ್ಯಂಕನಂ ಎಂಬ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಪುಸ್ತಕದ (ಕನ್ನಡ ವಿಭಾಗ) ಸಂಪಾದಕರಾಗಿಯೂ ಗಂಗಪ್ಪ ಕಾರ್ಯ ನಿರ್ವಹಿಸಿದ್ದಾರೆ.

*****