ಅನುದಿನ ಕವನ-೩೪೪, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಶೋಷಿತಳ ಸ್ವಾಗತ

ಕವಿ ಪರಿಚಯ:
ಮನು ಪುರ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ಮನೋಜ್ ಕುಮಾರ್ ಪಿ .ಎಚ್ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಪುರ ಗ್ರಾಮದವರು.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಾಗಿ ಕಥೆ ,ಕವಿತೆ,ಶಿಶುಗೀತೆಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರು.
ಸುಮಾರು 150ಕ್ಕೂ ಹೆಚ್ಚು ಕತೆ ಕವಿತೆಗಳನ್ನು ರಚಿಸಿದ್ದಾರೆ. ಸಾಮಾಜಿಕ ಜಾಲ ತಾಣವಾದ ಫೇಸ್ಬುಕ್,ಅವಧಿ,ಸಮಾಜಮುಖಿ,ಪ್ರತಿಲಿಪಿ ಮುಂತಾದ ಆನ್ ಲೈನ್ ಹಾಗೂ ಸಾಹಿತ್ಯಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಮಕ್ಕಳ ಸಾಹಿತ್ಯದ ಬಗ್ಗೆ ವಿಶೇಷ ಒಲುಮೆ ಇರುವ ಮನು ಪುರ ಅವರ ಶಿಶುಗೀತೆಗಳ ಸಂಕಲನ ಪ್ರಕಟಣೆಯ ಹಂತದಲ್ಲಿದೆ. ವಿವಿಧ ,ಸಂಘ ಸಂಸ್ಥೆಗಳು ಆಯೋಜಿಸಿರುವ ಕವಿಗೋಷ್ಠಿ ,ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುವ ಹೆಗ್ಗಳಿಗೆ ಇವರದು.
ಇಂದಿನ “ಅನುದಿನ ಕವನ” ದ ಗೌರವಕ್ಕೆ ಮನು ಪುರ ಅವರ ‘ಶೋಷಿತಳ ಸ್ವಾಗತ’ ಕವಿತೆ ಪಾತ್ರವಾಗಿದೆ.👇

ಶೋಷಿತಳ ಸ್ವಗತ…..

ಮೊಳ ಮಲ್ಲಿಗೆಯ ಮುಡಿದು
ಕಣ್ಣೀರ ಗುರುತನಳಿಸಿ
ಸಿಂಗಾರಗೊಂಡು
ಎದೆಸೀಳು ಕಾಣುವಂತೆ
ಸೆರಗಸುತ್ತಿ-ಕಾಯುತಿರುವೆ
ದೇಹಕೆ ಬೆಲೆ ಕಟ್ಟುವವನಿಗಾಗಿ

ಮನಸು ಇನ್ನು ಶುದ್ಧವೆ
ಒಮ್ಮೆಯೂ ಸುಖಿಸಿಲ್ಲ
ಹೊಟ್ಟೆಪಾಡಿನ ಕಸುಬಿದು
ಎಲ್ಲ ಮುಗಿದ ಮೇಲೂ
ಏನೊಂದು ಅರಿವಾಗದು .

ಅವಸರಕೆ ಸಿಕ್ಕ ದೇಹ
ಕಬ್ಭಿನಂತೆ ಹಿಂಡಿದಷ್ಟೇ
ಒಳಗಣ ನೋವು
ಒಬ್ಬರಿಗೂ ಕಾಣಲಿಲ್ಲ
ಕಂಡಿದ್ದರೆ …..
ನಾನೆಂದೊ ಗರತಿಯಾಗುತಿದ್ದೆ.

ಪಾಪ ಪುಣ್ಯದ ಮಾತಿಂದ
ಬದುಕು ತಾ ನಡೆದೀತೆ?
ವಿಧಿಯ ಮುಂದೆ ವಿವಸ್ತ್ರಳಾಗಿ
ಭಾವನೆಗಳ ಕತ್ತು ಹಿಸುಕಿ
ಗೊಂಬೆಯಂತೆ
ಮಾರಾಟದ ಸರಕಾಗಿಬಿಟ್ಟೆ
ಹಾಳು ಗಂಡು ಜನ್ಮಕೆ.

ತಿಂದುಂಡು ತೇಗಿದವರಿಗಿಲ್ಲದ
ಕಳಂಕ
ಇಲ್ಲಿಯೂ ನೊಂದವಳಿಗಂಟಿತು
ಈ ಸಮಾಜವೇ ಹೀಗೆ
ಬೆಕೇಂದೆ ಕಟ್ಟಿ ಬಿಡುತ್ತದೆ
ತನ್ನೆಲ್ಲ ಕೊಳಕ
ಪಾಪದವರ ತಲೆಗೆ

ಬಂದು ಹೋದವರಿಗೆ ಲೆಕ್ಕವಿಲ್ಲ
ಹಾಗಂತ
ಸಾಲು ಸಾಲು ಬಂಗಲೆಗಳು ನನಗಿಲ್ಲ
ಈಗಲೂ ಅದೇ ಚರಂಡಿ ಬಳಿಯ
ಹಳೆಯ ಗುಡಿಸಲು -ಮತ್ತವನ  ಫೋಟೊ
ಅತ್ತು ಬರಿಧಾಗಲು ಉಳಿದದ್ದು

-ಮನು ಪುರ, ತುಮಕೂರು ಜಿಲ್ಲೆ
*****