“ಬರೆಯುತ್ತಲೇ ತುಂಬಾ ಇಷ್ಟವಾದ ಕವಿತೆ. ಇದು ಪ್ರತಿ ಜೀವದ ಆತ್ಮಸಮರ್ಪಣೆಯ ಭಾವಗೀತೆ. ಓದಿನೋಡಿ ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಪ್ರಕೃತಿ ಬದುಕಿಗೆ ಆಸರೆ-ಆಧಾರವಾದರೆ, ಪ್ರೀತಿ ಬದುಕಿಗೆ ಸ್ಫೂರ್ತಿ-ಪ್ರೇರಣೆಯಾದರೆ. ಆಧ್ಯಾತ್ಮ ಬದುಕಿನ ಅಂತಿಮ ಸತ್ಯ-ಸತ್ವದ ಅನ್ವೇಷಣೆ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 👇
ಅದೃಶ್ಯನಿಗೊಂದು ಅರಿಕೆ.!
ಕಣ್ಣೊಳಗಿನ ದೀಪವಾಗಿ ದೇದೀಪ್ಯವಾಗಿ
ಬಾಳಹಾದಿ ಬೆಳಗಿಬಿಡು ನಿತ್ಯವು.!
ಅಂತರಾಳದ ರೂಪವಾಗಿ ನಿರೂಪವಾಗಿ
ದೇಹದಾಲಯ ಹರಸಿಬಿಡು ನಿತ್ಯವು.!
ಚಿತ್ತದೊಳಗೆ ಚೇತನವಾಗಿ ಚೈತನ್ಯವಾಗಿ
ಹರಿಸಿಬಿಡು ಹೊಂಬೆಳಕಿನ ಹರಿವು.!
ಹೃನ್ಮನದಿ ಕಂಕಣವಾಗಿ ಕಾರುಣ್ಯವಾಗಿ
ಸ್ಫುರಿಸಿಬಿಡು ಸುಜ್ಞಾನದ ಅರಿವು.!
ಎದೆಯೊಳಗೆ ವಿರಾಗವಾಗಿ ವಿಕಲ್ಪವಾಗಿ
ತೊರೆಸಿಬಿಡು ಮೋಹಗಳ ಸೆಳವು.!
ಧಮನಿಗಳ ಚಲನವಾಗಿ ಸಂಚಲನವಾಗಿ
ಹರಡಿಬಿಡು ಆಧ್ಯಾತ್ಮದ ಹೊಳಹು.!
ಮಾಯೆಗಳಿಂದ ಮುಕ್ತವಾಗಿ ವಿಮುಕ್ತವಾಗಿ
ನಡೆಸಿಬಿಡು ದೂರತೀರದೆಡೆ ದಿನವು.!
ಭವದಿ ನಿರ್ಮೋಹವಾಗಿ ನಿರ್ಲಿಪ್ತವಾಗಿ
ಬೆಸೆದುಬಿಡು ನಿರ್ವಾಣದೆಡೆಗೆ ಅನುಕ್ಷಣವು.!
ಅಗೋಚರ ಅಚ್ಯುತ ಅನಂತಾನಂತನೇ
ಆವಿರ್ಭವಿಸಿ ತೋರೊಮ್ಮೆ ನಿನ್ನಿರುವು.!
ನೀನೇ ಸಾಕಾರವಾಗಿ ಸಾಕ್ಷಾತ್ಕಾರವಾಗಿ
ದಿಗ್ದರ್ಶಿಸಿಬಿಡು ಬದುಕಿಗೊಂದು ತಿರುವು.!
ನಿರಾಕಾರ ನಿರಂಜನ ನಿಯಾಮಕನೇ
ಸಮೀಕರಿಸು ನಿನ್ನೆಡೆಗೆ ನನ್ನೊಲವು.!
ನೀನೇ ಬೋಧಿವೃಕ್ಷವಾಗಿ ಕಲ್ಪವೃಕ್ಷವಾಗಿ
ನೀಡಿಬಿಡು ನಿನ್ನೊಳಗೊಂದು ಠಾವು.!
ಎ.ಎನ್.ರಮೇಶ್. ಗುಬ್ಬಿ.
**”*”