ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಕ್ಕೆ ರಂಗಾಸಕ್ತರ ಆಗ್ರಹ

ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ ಕರ್ನಾಟಕದ ಪ್ರತಿಷ್ಠಿತ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ೧೯೮೯ರಲ್ಲಿ ಸ್ಥಾಪನೆಯಾದ ಈ ರಂಗಸಂಸ್ಥೆಗೆ ತಮ್ಮ ತನುಮನಧನ ಧಾರೆ ಎರೆದು ಕರ್ನಾಟಕದ ನಾಟಕ , ರಂಗಭೂಮಿ, ಸಂಗೀತ, ಜಾನಪದ ಮತ್ತು ಸಾಹಿತ್ಯ ವಲಯದ ಪ್ರತಿಭೆಗಳನ್ನು ಪೋಷಿಸಿ ಬೆಳೆಸುವ ಉದ್ದೇಶದಿಂದ ಬಿ ವಿ ಕಾರಂತರು ನಿರ್ಮಿಸಿದ ಸಂಸ್ಥೆ ಇದು. ಕಳೆದ ಮೂರು ದಶಕಗಳಿಂದಲೂ ಈ ಸಂಸ್ಥೆಯಲ್ಲಿ ರಂಗಭೂಮಿಗೆ ಸಂಬಂಧಿಸಿದ ಮತ್ತು ಇತರ ಸೃಜನಶೀಲ ಕಲಾಪ್ರಕಾರಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರವಾಡ, ಶಿವಮೊಗ್ಗ ಮತ್ತೆಡೆಗಳಲ್ಲೂ ಇರುವ ರಂಗಾಯಣ ತನ್ನ ಮೂರು ದಶಕಗಳ ಇತಿಹಾಸದಲ್ಲಿ ನೂರಾರು ಪ್ರತಿಭೆಗಳನ್ನು ಅರಳಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಘನತೆ, ಖ್ಯಾತಿ ಮತ್ತು ಗೌರವವನ್ನು ಉಳಿಸಿಕೊಂಡುಬಂದಿದೆ.

ಆಡಳಿತ ಪಕ್ಷ ಯಾವುದೇ ಇರಲಿ, ಇಲ್ಲಿಯ ಚಿಂತನೆಗೆ, ಜನತಂತ್ರದ ಆಶಯಕ್ಕೆ, ಸ್ವಾಯತ್ತತೆಗೆ ಧಕ್ಕೆ ಬಾರದ ರೀತಿಯಲ್ಲಿ ರಂಗಾಯಣ ಈವರೆಗೆ ನಡೆದುಕೊಂಡುಬಂದಿದೆ. ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡದ ಭಾಷಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ರಂಗಾಯಣದ ಇತಿಹಾಸದಲ್ಲಿ ಯಾವುದೇ ರೀತಿಯ ಪಂಥೀಯಭಾವನೆಗಳು ಈವರೆಗೂ ಬೇರೂರಿಲ್ಲ. ಎಡಪಂಥೀಯ, ನಡು ಪಂಥೀಯ ಎಂಬ ಭೇದವಿಲ್ಲದೆ ಎಲ್ಲ ಸಿದ್ದಾಂತ, ಧಾರೆಗಳಿಗೂ ರಂಗಾಯಣ ತನ್ನ ಭೂಮಿಕೆಯನ್ನು ಒದಗಿಸಿದೆ. ಎಲ್ಲ ವಿಚಾರಧಾರೆಗಳ ಸಾಹಿತಿಗಳು, ನಾಟಕಕಾರರು, ಕಲಾವಿದರು, ರಂಗಕರ್ಮಿಗಳು ರಂಗಾಯಣದ ಮೂಲಕ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ.

ಆದರೆ ಈ ಬಾರಿಯ ಕರ್ನಾಟಕ
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂದರ್ಭದಲ್ಲಿ ಹಾಲಿ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ರಂಗಭೂಮಿಯೊಡನೆ ಯಾವುದೇ ರೀತಿಯ ಸಂಬಂಧ ಇಲ್ಲದ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತಿರುವುದು ರಂಗಾಯಣದ ಪರಂಪರೆಗೆ ವಿರುದ್ದವಾಗಿದೆ. ಈ ಬಾರಿಯ ನಾಟಕೋತ್ಸವಕ್ಕೆ ಆಶಯ ಭಾಷಣ ಮಾಡಲು ಚಿತ್ರನಟಿ ಮತ್ತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರನ್ನೂ, ಸಮಾರೋಪ ಭಾಷಣ ಮಾಡಲು ಸಂಘಪರಿವಾರದ ಪರಿಚಾರಕ ಮತ್ತು ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನೂ ಆಯ್ಕೆ ಮಾಡಿರುವುದುಸೋಜಿಗ ಹುಟ್ಟಿಸುವಂತಿದೆ. ಈ ಆಯ್ಕೆ ರಂಗಾಯಣದ ಮೂಲ ಆಶಯಗಳಿಗೆ ಮತ್ತು ಕನ್ನಡ ಸಾಂಸ್ಕೃತಿಕ ಲೋಕದ ಆದರ್ಶಗಳಿಗೆ ವ್ಯತಿರಿಕ್ತವಾಗಿದೆ. ಮಾಳವಿಕಾ ಅವಿನಾಶ್ ನೇರವಾಗಿ ಆಡಳಿತಾರೂಢ ರಾಜಕೀಯ ಪಕ್ಷದೊಡನೆ ಮತ್ತು ಅದರ ಮೂಲ ಸಿದ್ಧಾಂತಗಳೊಡನೆ ಗುರುತಿಸಿಕೊಂಡವರಾಗಿದ್ದಾರೆ. ಹಾಗೆಯೇ ಚಕ್ರವರ್ತಿ ಸೂಲಿಬೆಲೆ ತಮ್ಮ ಪ್ರಖರ ಎನ್ನಲಾಗುವ ಭಾಷಣಗಳ ಮೂಲಕ ಕೋಮು ದ್ವೇಷವನ್ನು ಹರಡುವ, ಸುಳ್ಳು ಇತಿಹಾಸವನ್ನು ಪ್ರಚಾರ ಮಾಡುವ ಸಂಘಪರಿವಾರದ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಬ್ಬರಿಂದ ರಂಗಭೂಮಿ ಕ್ಷೇತ್ರಕ್ಕೆ ಯಾವುದೇ ವಿಧವಾದ ಕೊಡುಗೆ ಇಲ್ಲ. ತಮ್ಮ ಕೋಮುವಾದಿ ಚಿಂತನೆಗಳ ಮೂಲಕ ಸಮಾಜದಲ್ಲಿ ದ್ವೇಷದ ವಿಷಬೀಜಗಳನ್ನು ಬಿತ್ತುವುದರಲ್ಲಿ ಸಂಘಪರಿವಾರದ ಪರಿಚಾರಕರಾಗಿ ಅವಿರತ ಶ್ರಮಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ಬಹುರೂಪಿ ನಾಟಕೋತ್ಸವ “ದಂತಹ ಒಂದು ಸೃಜನಶೀಲ ವೇದಿಕೆಯಲ್ಲಿ ಸಮಾರೋಪ ಅತಿಥಿಯಾಗಿ ಆಹ್ವಾನಿಸಿರುವುದು ಖಂಡಿತ ಒಪ್ಪುವ ಮಾತಲ್ಲ. ಈ ನಡೆಯನ್ನು ನಾವು ಖಂಡಿಸುತ್ತೇವೆ.

ರಂಗಾಯಣ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಮಾತ್ರವಲ್ಲ, ಅದೊಂದು ಸ್ವಾಯತ್ತ ಸಂಸ್ಥೆ. ಆಳುವ ಪಕ್ಷ ಯಾವುದೇ ಇರಲಿ, ರಂಗಾಯಣ ನಿದೇರ್ಶಕರ ಒಲವು-ನಿಲುವು ಏನೇ ಇರಲಿ, ರಂಗಾಯಣದ ಮೂಲ ಆಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಂಗಾಯಣದ ಚಟುವಟಿಕೆಗಳು ನಡೆಯಬೇಕು. ಇದನ್ನು ಕೋಮುವಾದಿಗಳ ವೇದಿಕೆಯಾಗಿ ಪರಿವರ್ತಿಸುವುದು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಜನತಂತ್ರ ವ್ಯವಸ್ಥೆಯ ಮುನ್ನಡೆಗೆ ತಡೆಯೊಡ್ಡುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರು ರಂಗಾಯಣದ ಮೂಲ ಆದರ್ಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ರಂಗಾಯಣ ರಾಜಕೀಯದಿಂದ ಮುಕ್ತವಾದ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ರಂಗಾಯಣದ ಆಡಳಿತ ನಿರ್ವಹಣೆಯಲ್ಲಿ ಸಲ್ಲದು. ಅಡ್ಡಂಡ ಕಾರ್ಯಪ್ಪ ಅವರು ನೇರವಾಗಿಯೇ ತಾವು ರಾಜಕೀಯ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದು, ರಂಗಾಯಣದ ನಿರ್ದೇಶಕರಾಗಿ ತಮ್ಮ ಜವಾಬ್ದಾರಿಯನ್ನು ಮರೆತಂತೆ ನಡೆದುಕೊಳ್ಳುತ್ತಿರುವುದನ್ನು ನಾವು
ಖಂಡಿಸುತ್ತೇವೆ. ರಂಗಾಯಣದ ಕಿರಿಯ ಕಲಾವಿದರನ್ನು ಬೆದರಿಸುವ ಮೂಲಕ ಅಡ್ಡಂಡ ಕಾರ್ಯಪ್ಪ ಅವರು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವುದನ್ನು ನಾವು ಖಂಡಿಸುತ್ತೇವೆ.

ಸಂವಾದ ಎಂಬ ಖಾಸಗಿ ಚಾನೆಲ್
ಒಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಕಾರ್ಯಪ್ಪ ಅವರು ಬಿ ವಿ ಕಾರಂತರ ನಂತರ ರಂಗಾಯಣವನ್ನು ನಿರ್ವಹಿಸಿದ ರಂಗಕರ್ಮಿಗಳನ್ನೂ ಮಾವೋವಾದಿಗಳು ಎಂದು ಮೂದಲಿಸುವ ಮೂಲಕ, ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ಮಹತ್ತರ ಪಾತ್ರ ವಹಿಸಿರುವ ಕಲಾವಿದರ, ಸಾಹಿತಿಗಳ ಮತ್ತು ರಂಗಕರ್ಮಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ತನ್ನ ಮೂರು ದಶಕಗಳ ಇತಿಹಾಸದಲ್ಲಿ ರಂಗಾಯಣವನ್ನು ಕಟ್ಟಲು ರಾಜ್ಯದ ನೂರಾರು ರಂಗಕರ್ಮಿಗಳು, ಸಾಹಿತಿಗಳು, ಚಿಂತಕರು ಶ್ರಮಿಸಿದ್ದು, ಯಾವುದೇ ರೀತಿಯ ರಾಜಕೀಯ ಸೋಂಕು ಇಲ್ಲದೆಯೇ ನಡೆದುಬಂದಿದೆ. ಆದರೆ ಅಡ್ಡಂಡ ಕಾರ್ಯಪ್ಪ ತಮ್ಮ ವೈಯಕ್ತಿಕ ರಾಜಕೀಯ ನಿಲುವು ಮತ್ತು ಒಲವುಗಳನ್ನು ರಂಗಾಯಣಕ್ಕೂ ಎಳೆದುತಂದಿರುವುದು ಅಕ್ಷಮ್ಯ. ತಮ್ಮ ವ್ಯಕ್ತಿಗತ ರಾಜಕೀಯ-ಸೈದ್ದಾಂತಿಕ ನಿಲುಮೆಗಳನ್ನು ರಂಗಾಯಣದ ಚಟುವಟಿಕೆಗಳ ಮೇಲೆ ಹೇರುವುದನ್ನು ನಾವು ಖಂಡಿಸುತ್ತೇವೆ.

ರಂಗಾಯಣದ ನಿರ್ದೇಶಕರ ನೇಮಕದ ವೇಳೆ ರಂಗ ಸಮಾಜ ಸಲ್ಲಿಸಿದ್ದ ಅರ್ಹ ವ್ಯಕ್ತಿಗಳ ಪಟ್ಟಿಯಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಹೆಸರೇ ಇರಲಿಲ್ಲವಾದರೂ, ತಮ್ಮ ರಾಜಕೀಯ ಸಂಪರ್ಕಗಳನ್ನು ಬಳಸಿ ಅನೈತಿಕವಾಗಿ, ಹಿಂಬಾಗಿಲ ಪ್ರವೇಶದ ಮೂಲಕ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಈಗ ಸಂಘಪರಿವಾರದ ಅಜೆಂಡಾಗಳನ್ನು ರಂಗಾಯಣದ ಮೂಲಕ ಜಾರಿಗೊಳಿಸಿ ಈ ರಂಗಾಯಣಕ್ಕೆ ತಮ್ಮ ತನುಮನಧನ ಅರ್ಪಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಹಿರಿಯ ತಲೆಮಾರಿನ ಎಲ್ಲ ಕಲಾವಿದರನ್ನೂ ಮತ್ತು ಸಾಹಿತಿ ಚಿಂತಕರನ್ನೂ ಅಪಮಾನಿಸುವ ಮೂಲಕ ಕಾರ್ಯಪ್ಪ ಅವರು ಸಾಂಸ್ಕೃತಿಕ ಲೋಕಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ರಂಗಾಯಣದ ಆಡಳಿತ ನಿರ್ವಹಣೆಯಲ್ಲಿ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಕಲಾವಿದರಿಗೆ ಮತ್ತು ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದನ್ನೂ ನಾವು ಖಂಡಿಸುತ್ತೇವೆ.

ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ಕನ್ನಡಿಗರ, ಕನ್ನಡದ ಸೃಜನಶೀಲ ಕಲಾವಿದರ ಸ್ವತ್ತಾಗಿದ್ದು ಈ ಸಂಸ್ಥೆಯನ್ನು ದಾರಿತಪ್ಪಿಸುವಂತಹ ನೀತಿಗಳನ್ನು ಅನುಸರಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಂಗ ಸಮಾಜ ಮತ್ತು ರಾಜ್ಯ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸಲು ಮೈಸೂರಿನ ಎಲ್ಲ ಸೃಜನಶೀಲ ಮನಸ್ಸುಗಳು, ಪ್ರಗತಿಪರ ಚಿಂತಕರು, ಸಾಹಿತಿ ಕಲಾವಿದರು ತೀರ್ಮಾನಿಸಿದ್ದೇವೆ. ರಂಗಾಯಣ ಕನ್ನಡಿಗರ ಆಸ್ತಿ ಇದರ ಸ್ವಾಯತ್ತತೆಯ ರಕ್ಷಣೆಗಾಗಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ.

-ಗೋಪಾಲಕೃಷ್ಣ ನೆಲೆ ಹಿನ್ನೆಲೆ, ಪ.ಮಲ್ಲೇಶ್, ನಾ. ದಿವಾಕರ, ಎನ್.ಎಸ್.ಗೋಪಿನಾಥ್, ಕಾಳೇಗೌಡ ನಾಗವಾರ, ಮೈಮ್ ರಮೇಶ್, ಮಾಧವ ಖರೆ, ಕೆ. ಎಸ್.ಶಿವರಾಮು, ಗ.ಶಾ.ಭೋಗಾನಂದೀಶ್, ವಿ.ಪುರುಷೋತ್ತಮ, ರಾಜೇಶ್ ಹಿಂದೂ, ಡಾ.ವಿ. ಲಕ್ಷ್ಮೀನಾರಾಯಣ, ರತಿರಾವ್, ಪ್ರೊ.ಪಂಡಿತಾರಾಧ್ಯ, ಜಿ.ಪಿ.ಬಸವರಾಜು, ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ, ಆನಂದ, ಎಂ.ಎಫ್.ಖಲೀಂ, ಖಾದರ್ ಅಹಮದ್, ಜಗದೀಶ್ ಸೂರ್ಯ, ಲ.ಜಗನ್ನಾಥ್, ನ.ಶಿವಮೂರ್ತಿ, ಎಚ್. ಜನಾರ್ಧನ್, ಮಂಜು ಮಂಗಲ, ಕಾತ್ಯಾಯಿನಿ ಮಹಾ ಬೆಳಕು, ದರ್ಶನ್ ಎಚ್.ಯು, ವಿಜಯಕುಮಾರ್, ಕೃಷ್ಣಮೂರ್ತಿ-ಬಿಎಸ್ಪಿ ರಾಜ್ಯಾಧ್ಯಕ್ಷರು, ಪ್ರೊ ಎಚ್.ಎಲ್.ವೆಂಕಟೇಶ್, ಮುನಿವೆಂಕಟಪ್ಪ, ಸಿದ್ದೇಶ್, ಸೋಮಶೇಖರ್, ಆರ್.ಚಕ್ರಪಾಣಿ, ಕೇಶವ ಪಿ.ಎನ್, ಹೊಸಳ್ಳಿ ಶಿವು, ಮಹದೇವು ಕುಕ್ಕರಹಳ್ಳಿ, ಬೆಳ್ಳಾಳೆ ಬೆಟ್ಟೇಗೌಡ, ದಯಾನಂದ ಮೂರ್ತಿ, ರಾಮಚಂದ್ರ ಎಸ್.ಜಿ, ಎಂ.ಮೋಹನ್‌ ಕುಮಾರ್‌ಗೌಡ, ಎಲ್.ಎಂ.ಚಂದ್ರು, ನಿಸರ್ಗ ಸಿದ್ದರಾಜು, ಬಾಬುರಾಜ್, ಕೆಂಪೇಗೌಡ, ರಹಮಾನ್ ಖಾನ್, ಸಂಬಯ್ಯ ಪಿ, ವಜ್ರಮುನಿ, ಕೆ.ಬಸವರಾಜು, ಹೊಸಕೋಟೆ ಬಸವರಾಜು, ಮರಂಕಯ್ಯ, ಜಗನ್ನಾಥ್ ಸಿಪಿಐ, ಪುರುಷೋತ್ತಮ-ಮಾಜಿ ಮೇಯರ್, ಶ್ರೀಕಂಠ ಸ್ವಾಮಿ.
*****