ಬಳ್ಳಾರಿಯಲ್ಲಿ ಬಿಜೆಪಿ ಜಯಭೇರಿ: ಮೊದಲ ಪ್ರಯತ್ನದಲ್ಲೇ ವಿಧಾನಸೌಧದ ಮೆಟ್ಟಿಲು ಏರಿದ ಏಚರೆಡ್ಡಿ ಸತೀಶ್‍

ಬಳ್ಳಾರಿ,ಡಿ.14:ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರು 2659 ಮತಗಳು ಪಡೆಯುವುದರ ಮೂಲಕ ಜಯಗಳಿಸಿದ್ದಾರೆ.
ತಮ್ಮ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ ಸಿ ಕೊಂಡಯ್ಯ ಅವರನ್ನು 757 ಮತಗಳಿಂದ ಪರಾಭವ ಗೊಳಿಸಿದರು.


ಮತ ಎಣಿಕೆ ಬಳಿಕ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಫಲಿತಾಂಶ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು.‌
ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರಿಗೆ 2659, ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗೆ 1902, ಪಕ್ಷೇತರ ಅಭ್ಯರ್ಥಿಗಳಾದ ಗಂಗೀರೆಡ್ಡಿ ಅವರಿಗೆ 04 ಮತ್ತು ಸಿ.ಎಂ.ಮಂಜುನಾಥ ಅವರಿಗೆ 02 ಮತಗಳನ್ನು ಪಡೆದಿದ್ದಾರೆ.
ಅಭ್ಯರ್ಥಿಯು ಚುನಾವಣೆಯಲ್ಲಿ ಗೆಲ್ಲಲು 2284 ಮತಗಳ ಅವಶ್ಯವಿದ್ದು, ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರು ಮೊದಲ ಸುತ್ತಿನಲ್ಲೇ 2659 ಮತಗಳನ್ನು ಪಡೆಯುವದರ ಮೂಲಕ ಜಯಗಳಿಸಿದರು.
ಒಟ್ಟು 4654 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು. 87 ಮತಗಳು ತಿರಸ್ಕೃತಗೊಂಡಿದ್ದವು. ಎಸ್.ಪಿ ಸೈದುಲ್ಲಾ ಅಡಾವತ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಮಾಣ ಪತ್ರ ವಿತರಣೆ: ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರಿಗೆ ಚುನಾವಣಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ರಾಮಪ್ರಸಾತ್ ಮನೋಹರ್, ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರು.
*****