ಸಂವಾದ
ತಟ್ಟೆಯಲ್ಲಿನ ಮೊಟ್ಟೆ ಕಂಡು
ತರಕಾರಿ ಕೇಳಿತು
ಅರೆ ನೀನೇನಿಲ್ಲಿ….?
ಪಿಳಿಪಿಳಿ ಕಣ್ಣುಬಿಡುತ
ಮೊಟ್ಟೆ ತಾನುಲಿಯಿತು…
ನಿಮ್ಮೊಡನೆ ಜಾಗ ಉಂಟು
ನನಗೂ ಸಹ ಇಲ್ಲಿ.
ಹೌದಾ…….!!!!?
ನಿನ್ನ ಜಾತಿಯೇ ಬೇರೆ
ನಿನ್ನ ರೀತಿಯೇ ಬೇರೆ
ಇದು ಶಾಲೆ
ಅದೇಗೆ, ಸ್ಥಾನ ನಿನಗಿಲ್ಲಿ
ಮೊಟ್ಟೆ ಗುಣುಗುಟ್ಟಿತು.
ಎಷ್ಟು ಕಾಲ
ಹೀಗೆಯೇ ವಂಚಿಸುವಿರಿ
ಜಾತಿ ,ರೀತಿ, ನೀತಿ ಎಂದು
ನಿಮ್ಮಷ್ಟೇ ಶಕ್ತಿ ಉಂಟು ನನಗೆ
ಬಿಡು ತಿನ್ನಲಿ
ಮೊಟ್ಟೆ ನುಸುನಕ್ಕಿತು.
ಮಗು ಎರಡನ್ನು ಹಿಡಿದು
ಗದರಿಸಿ ಹೇಳಿತು
ಆಯ್ಕೆ ನನ್ನದು
ಬೇಕಿಲ್ಲ, ಅನುಮತಿ ಯಾರದು,
ಮೊಟ್ಟೆ ಅಥವ ಬಾಳೆಹಣ್ಣು
ಅಥವ ಎರಡೂ….. !
ತಟ್ಟೆ ತೊಳೆದಿಟ್ಟ ಮೇಲೆ
ಮೊಟ್ಟೆ ತಿಂದವನು,ತಿನ್ನದವನು
ಇಬ್ಬರೂ ಕೂಡ ಎಂದಿನಂತೆ
ಕೈ ಕೈ ಹಿಡಿದೆ ಸಾಗಿದರು
ತಮ್ಮ ತಮ್ಮ ಆಯ್ಕೆಗಳ
ಪರಸ್ಪರ ಗೌರವಿಸುತ್ತ.
ಕಾಂಪೌಂಡ್ ಹೊರಗಿನ
ಬೇಕು ಬೇಡಗಳ ಸದ್ದು ಮಾತ್ರ
ನಿಲ್ಲಲೇ ಇಲ್ಲ….!
ಶತ ಶತಮಾನಗಳಿಂದಲೂ
ಹಿಡಿದ
ಶ್ರೇಷ್ಠ ಅನಿಷ್ಠಗಳ ವ್ಯಸನ
ಅಷ್ಟು ಸುಲಭವಾಗಿ ಬಿಟ್ಟೀತೆ?
ಮಕ್ಕಳಿಗೆ
ಹೇಳಿಕೊಡಬೇಕಿರುವುದು
ಐಕ್ಯತೆಯನ್ನು ಮಾತ್ರ
ವಿಭಜನೆಯನ್ನು ಸಮಾಜವೇ ಕಲಿಸಿಬಿಡುತ್ತದೆ
-ಮನು ಪುರ, ತುಮಕೂರು
*****
ಮನು ಪುರ. ತುಮಕೂರು
ಬಹಳ ಅರ್ಥಪೂರ್ಣ ಹಾಗೂ ಸಮಕಾಲೀನ ಕವಿತೆ ಸರ್.. ತುಂಬಾ ಚೆನ್ನಾಗಿ ರಚಿಸಿದ್ದೀರಿ.. ನೈಜವಾದ ನೈತಿಕತೆ ಅರಿತವರು ಮಾತ್ರ ಬದುಕುತ್ತಾರೆ.. ಅಭಿನಂದನೆಗಳು ಸರ್ ನಿಮಗೆ ಶುಭವಾಗಲಿ..