ಅನುದಿನ ಕವನ:೩೪೯: ಕವಿ: ಮಹೇಶ‌ ಬಳ್ಳಾರಿ, ಕೊಪ್ಪಳ , ಕವನದ ಶೀರ್ಷಿಕೆ: ಒಂದು ಮೊಟ್ಟೆಯ ಕತೆ

ಒಂದು ಮೊಟ್ಟೆಯ ಕತೆ

ಕತೆ ಹೇಳುವೆ ನನ್ನ ಕತೆ ಹೇಳುವೆ
ನೂರು ವ್ಯಥೆಗಳೀಗ ನನ್ನ ಜೊತೆಯಾಗಿವೆ

ಪಾಳಿ ಪ್ರಕಾರ ಗೂಳಿಗಳ ತೆರದಿ
ಗುದ್ದಿ ಗುದ್ದಿ ಮಾಡುತ್ತಿರುವ
ದಾಳಿಗಳ ದಾಳಕ್ಕೆ ನಲುಗಿದ್ದೇನೆ

ನನ್ನ ಕುದಿಸಿ, ಕತ್ತರಿಸಿ, ಕಿವುಚಿ
ಕೊಂದು
ಬಾಯಿ ಚಪ್ಪರಿಸುತ್ತ ತಿಂದವರೂ

ಇದೀಗ ಹರತಾಳದಲ್ಲಿ ನನ್ನ ಧಿಕ್ಕರಿಸುವ
ಬೋರ್ಡು ಹಿಡಿದಿದ್ದಾರೆ

ಕತ್ತಲಲ್ಲಿ, ಹಿತ್ತಲಲ್ಲಿ
ಮುಖ ಮಾಚಿಕೊಂಡು ಬಂದು
ನನ್ನ ಮೆದ್ದವರೂ

ಇದೀಗ ಮಡಿವಂತರ ಸೋಗಿನಲ್ಲಿ
ನನ್ನ ಕತ್ತು ಹಿಚುಕುತ್ತಿದ್ದಾರೆ

ಬಣಗಳ ಬಣ್ಣ ಕೊಟ್ಟು
ರಾಜಕೀಯ ರಂಗಪಂಚಮಿ
ಯಾಡಬೇಕೆನ್ನುತ್ತಾರೆ

ಏಳು ಬಣ್ಣಗಳ ಸೌಹಾರ್ದದ ‘ಬಿಳಿ’ ಒಡಲು
ನನ್ನದೆಂಬುದ ಮರೆಯುತ್ತಾರೆ

ಬಾಳೆಹಣ್ಣಿಗೂ – ನನಗೂ
ಜಗಳ ಹಚ್ಚುತ್ತಾರೆ

ನಾನು ಹೊರಗೆ ಬಿಳಿ – ಒಳಗೆ ಹಳದಿ
ಅವನು ಹೊರಗೆ ಹಳದಿ – ಒಳಗೆ ಬಿಳಿ

ನಮ್ಮೊಳ-ಹೊರಗು ಬೇರೆಯಿದ್ದರೂ
ನಿಮ್ಮೊಳಗಿನ ಬೆರಗಿಗಾಗಿಯೇ ದುಡಿಯುತ್ತಿದ್ದೇವೆ

ಆಕಾಶದೆತ್ತರದ ತೇಲಾಟ ಬಿಟ್ಟು
ಒಮ್ಮೆ ನೆಲದಾಳಕ್ಕಿಳಿದು ಬನ್ನಿ
ನೆಲದ ನೋವುಗಳ ನೋಡ ಬನ್ನಿ

ನಮ್ಮದು
ಹಸಿದವರ ತತ್ವ
ನೋವುಂಡವರ ಸಿದ್ಧಾತ

ಕಸಿಯದಿರಿ ತುತ್ತುಗಳ ಚೀಲ
ನಾಳೆ ನಿಮಗೂ ಕುತ್ತು ತಂದೀತು ..

– ಮಹೇಶ ಬಳ್ಳಾರಿ, ಕೊಪ್ಪಳ
*****