ಕವಯತ್ರಿ ಪರಿಚಯ:
ಶಿಲ್ಪಾ ಪತ್ತಾರ ವಿಜಯಪುರ ಜಿಲ್ಲೆಯ ಸಿಂದಗಿಯವರು. ವಿಶೇಷವೆಂದರೆ ಎರಡು ಮಕ್ಕಳ ತಾಯಿಯಾದ ಹಲವು ವರ್ಷಗಳ ಬಳಿಕ ಕವನ ರಚಿಸಲು ಆರಂಭಿಸಿದ್ದಾರೆ.. ದೊಡ್ಡ ಕುಟುಂಬದ ಗುರುತರ ಹೊಣೆ ಹೊತ್ತು ಸದ್ಗೃಹಿಣಿಯಾಗಿರುವ ಶಿಲ್ಪಾ ಅವರು ಮನೆವಾಳ್ತೆಯನ್ನು ನೆರೆ ಹೊರೆಯವರೆಲ್ಲರೂ ಮೆಚ್ಚಿ ಕೊಂಡಾಡುವಂತೆ ಸಂಸಾರ ನಿಭಾಯಿಸುತ್ತಿದ್ದಾರೆ. ಮನೆಗೆಲಸಗಳನ್ನೆಲ್ಲಾ ತಾವೇ ನಿರ್ವಹಿಸುತ್ತಾ ಬಿಡುವಿನ ವೇಳೆಯಲ್ಲಿ ವ್ಯರ್ಥ ಕಾಲಹರಣ ಮಾಡದೇ ಉತ್ತಮ ಪುಸ್ತಕ ವಾಚನ, ಕವನ ರಚನೆ, ಗೀತಗಾಯನ, ಸತ್ ಚಿಂತನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ, ಕಾರ್ಯಕ್ರಮ ನಿರೂಪಣೆಗಳಲ್ಲಿ ನಿರಂತರ ಚಟುವಟಿಕೆಗಳಲ್ಲಿರುತ್ತಾರೆ.
ಶಿಲ್ಪಾ ಅವರ ತಂದೆ ಚಂದ್ರಕಾಂತ ಕಾಳಪ್ಪ ಸಿರಸಂಗಿ ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಕೋಟುಮಚಿಗಿ ಗ್ರಾಮದವರು. ಇವರು ಅವಿಭಜಿತ ಬಳ್ಳಾರಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ಪ್ರಸ್ತುತ ಹೊಸಪೇಟೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಶಿಲ್ಪಾ ಸಿ ಪತ್ತಾರ ಅವರ ಕಾಡುವ ಕನಸುಗಳು ಕವಿತೆ ಪಾತ್ರವಾಗಿದೆ.👇
*****
ಕಾಡುವ ಕನಸುಗಳು…..
ಕನಸ್ಯಾಕ ಕಾಡತಾವ ಕನಸ್ಯಾಕ ಬೀಳತಾವ, ಕನಸೆಲ್ಲ ಮನಸಿನಾ ಕಲ್ಪನಾ….. ಈಡೇರದಾಸೆಗಳ ದಿಬ್ಬಣಾ…..
ಹೊಟ್ಟೆ ತುಂಬಿದಂಥಾ ಕನಸು ಬಡವನ ರಟ್ಟೆ ಕಾಣುವಂಥಾ ಕನಸು ಇಟ್ಟು ಹಂಗಿಸುತಲಿರುವ ಪಟ್ಟದರಸನಾ ಕನಸೂ…..
ಸುಟ್ಟು,ಸುಡದಂಥಾ ಕನಸು ಸಿರಿತನ, ಅಟ್ಟ ತುಂಬಿದಂಥಾ ಕನಸು ಕೊಟ್ಟು ಕೊಡದಂತಿರುವ ಬೆಟ್ಟದಂಥ ಮನದ ಕನಸೂ…..
ಜುಟ್ಟು,ಜನಿವಾರದ ಕನಸು ಒಡೆತನ, ಬಿಟ್ಟು ಹೋಗದಂಥಾ ಕನಸು ಲೊಟ್ಟೆ ಜಾತಿಎನ್ನುತಲೆಲ್ಲವ ಮೆಟ್ಟಿನಿಂತಿರುವಾ ಕನಸೂ…..
ಕಟ್ಟೆ,ಪುರಾಣದ ಕನಸು ಹಗೆತನ,ಮನದಿ ಮುಸುಕಿದಂಥಾ ಕನಸು ಬಿಟ್ಟು ಹೋಗುವಂಥಾ ಎಲ್ಲವ ಪಟ್ಟು ಬಿಡದೆ ಪಡೆಯುವ ಕನಸೂ…..
ದಟ್ಟ,ಅರಣ್ಯದ ಕನಸು ಮನಸಿನ,ಪುಟ್ಟ ಭಯದಂಥಾ ಕನಸು ಥಟ್ಟನೆ ಕೈಹಿಡಿದು ನಡೆಸುವ ದಿಟ್ಟ ಗುರುವಿನ ಅಭಯದ ಕನಸೂ…..
-ಶಿಲ್ಪಾ.ಸಿ.ಪತ್ತಾರ, ಸಿಂದಗಿ,
*****