ಅವಳೆಂದರೆ ಹಾಗೆ
–
ಕಡಲು ಉಕ್ಕೇರಿದಂತೆ,
ಆರ್ಭಟಿಸಿದಂತೆ
ಕೆಲ ಸಮಯದ ನಂತರ
ಶಾಂತತೆಯಿಂದ ತೀರಕೆ
ಬಂದು ಬಾಹುಗಳಿಂದ
ಬರಸೆಳೆದು ಅಪ್ಪಿಕೊಂಡಂತೆ
ಅವಳೆಂದರೆ ಹಾಗೆ
–
ಕಡಲ ತೀರದ ಹಸಿರೆಲ್ಲ
ಮೈವೆತ್ತಂತೆ,
ಮೈಮನಗೆ ಮುದ ನೀಡಿದಂತೆ
ಅವಳೆಂದರೆ ಹಾಗೆ
–
ಅಲೆಗಳ ಭೋರ್ಗರೆವ
ನಿನಾದ ಸದಾ ಅವಳೆದೆಯಲ್ಲಿ
ಅದೂ ಕೇವಲ ನನಗಾಗಿ
ಹೌದು ಅವಳೆಂದರೆ ಹಾಗೆ
–
ಬಾನೆತ್ತರಕೆ ಬೆಳೆದರೂ ತೀರದೆ
ಮತ್ತಷ್ಟೂ ಬೆಳೆಯಬೇಕೆಂಬ
ಹಂಬಲದ ತೆಂಗಿನ ಮರದಂತೆ
ಅವಳ ಪ್ರೇಮದ ಪರಿ
ಅವಳೆಂದರೆ ಹಾಗೆ
–
ಅವಳ ಚಂದದ ಕಣ್ಣೋಟವೇ
ನನ್ನೆದೆಯಾಳದ ಕಡಲಿನಲಿ
ಮೂಡುವ ರಂಗು ರಂಗಿನ ಬೆಳಗು ಸಂಜೆಯು
ಅವಳೆಂದರೆ ಹಾಗೆ
–
ಅವಳ ಮುಗುಳ್ನಗೆಯೇ
ಬೆಟ್ಟ ಕಣಿವೆಯ
ಏರಿಳಿವಿನ ತಿರುವಿನಲಿ
ಧುಮ್ಮಿಕ್ಕುವ ಝರಿಯು
ಅವಳೆಂದರೆ ಹಾಗೆ
–
ಕಡಲ ತೀರದ
ತೀರಲಾರದ ಉಕ್ಕೇರುವ
ಒಲವ ಸದಾ ಹೊಂದಿರುವವಳು
ಅವಳು ಕೇವಲ ನನ್ನವಳು
ಅವಳೆಂದರೆ ಹಾಗೆ………
-ಸಿದ್ಧರಾಮ ಕೂಡ್ಲಿಗಿ
******